ಹೊಸಪೇಟೆ: ತಾಲ್ಲೂಕಿನ ಕಮಲಾಪುರದ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಮೃಗಾಲಯದಲ್ಲಿ ‘ದೇವಿ’ ಎಂಬ ಹೆಸರಿನ ಹೆಣ್ಣು ಹುಲಿ ವಯೋಸಹಜ ಕಾಯಿಲೆಯಿಂದ ಗುರುವಾರ ಮೃತಪಟ್ಟಿದೆ ಎಂದು ಉಪಸಂರಕ್ಷಣಾಧಿಕಾರಿ ಹಾಗೂ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜೇಶ್ ನಾಯ್ಕ ತಿಳಿಸಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಿಲುಕಿ ತೀವ್ರವಾಗಿ ಗಾಯಗೊಂಡು ನಿತ್ರಾಣವಾಗಿದ್ದ ಹೆಣ್ಣು ಹುಲಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿತ್ತು. ಮೃಗಾಲಯದಲ್ಲಿರುವ ರಕ್ಷಣಾ ಕೇಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ವೈದೋಪಚಾರ ನೀಡಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಈ ಹುಲಿಗೆ ಅಂದಾಜು 18 ರಿಂದ 19 ವರ್ಷ ವಯಸ್ಸಾಗಿದ್ದು, ವಯೋಸಹಜವಾಗಿ ಮೃತಪಟ್ಟಿರುತ್ತದೆ ಎಂದು ತಿಳಿಸಿದ್ದಾರೆ.