ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೆಲ ನಾಯಕರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆಯೇ ಹೊರತು ಜನರ ಮೇಲಿನ ಕಾಳಜಿಯಿಂದಾಗಿ ಅಲ್ಲ. ಜಾತಿ, ಧರ್ಮದ ಹೆಸರಿನಲ್ಲಿ ಈಗಾಗಲೇ ಜನರಿಗೆ ಮಂಕು ಬೂದಿಯನ್ನು ಬಿಜೆಪಿ ನಾಯಕರು ಎರಚಿದ್ದಾರೆ. ಈಗ ಜನಾಕ್ರೋಶ ಯಾತ್ರೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾತ್ರೋ ರಾತ್ರಿ ಅಡುಗೆ ಅನಿಲ ದರ ಹೆಚ್ಚಿಸಿದೆ. ಉಜ್ವಲಾ ಯೋಜನೆಯ ಅಡುಗೆ ಅನಿಲ ದರವನ್ನೂ ಏರಿಕೆ ಮಾಡಿದ್ದು, ಪೆಟ್ರೋಲ್, ಡಿಸೇಲ್ ದರವನ್ನು ಹೆಚ್ಚಳ ಮಾಡುವ ಮೂಲಕ ಜನರ ಮೇಲೆ ಹೊರೆ ಹಾಕಿದೆ ಎಂದು ದೂರಿದರು.
ಕೇಂದ್ರ ಸರ್ಕಾರಕ್ಕೆ ಜನರ ಮೇಲೆ ಹಾಗೂ ಮಹಿಳೆಯ ಮೇಲೆ ಕಾಳಜಿ ಇಲ್ಲ. ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಇಡೀ ದೇಶದಾದ್ಯಂತ ಮಹಿಳಾಕ್ರೋಶ ಪ್ರತಿಭಟನೆ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಮಹಿಳೆಯರ ಹಿತದೃಷ್ಟಿಯಿಂದ ಗೃಹಲಕ್ಷ್ಮೀ, ಶಕ್ತಿ ಯೋಜನೆ ಸೇರಿ ಹಲವು ಯೋಜನೆಗಳನ್ನು ನೀಡಿದೆ. ಇದನ್ನು ನೋಡಿ ಬಿಜೆಪಿ ನಾಯಕರಿಗೆ ಅಸೂಯೆ ಉಂಟಾಗಿದೆ. ಹೀಗಾಗಿ ಬಿಜೆಪಿ ಮುಖಂಡರು ನಮ್ಮ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಇಂಧನ ದರ ಹಾಗೂ ದಿನ ಬಳಕೆ ದರವನ್ನೂ ಹೆಚ್ಚಳ ಮಾಡಿದೆ. ಇದರ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ಯುಪಿಎ ಸರ್ಕಾರ ಇದ್ದಾಗ ಸಿಲಿಂಡರ್ ದರ 450 ರೂ. ಇತ್ತು. ಪ್ರಸ್ತುತ ಸಾವಿರ ರೂ. ದಾಟಿದೆ. ಕನ್ನಡಿಗರಾದ ನಾವು ನಮ್ಮ ದೇಶಕ್ಕೆ ಜಿಡಿಪಿ ಹಾಗೂ ತೆರಿಗೆಯನ್ನು ಕಟ್ಟುವಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ. ಆದರೆ, ನಮಗೆ ಮರಳಿ ಬರುತ್ತಿರುವುದು ನೂರು ರೂಪಾಯಿಗೆ 13 ಪೈಸೆ ಮಾತ್ರ. ಹೀಗಾಗಿ ನಾವು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಜನರ ಮೇಲೆ ತೆರಿಗೆ ಹಾಕಿ, ಉದ್ಯಮಿಗಳಾದ ಅಂಬಾನಿ, ಅದಾನಿ ಅವರನ್ನು ಶ್ರೀಮಂತರನ್ನಾಗಿ ಕೇಂದ್ರ ಸರ್ಕಾರ ಮಾಡುತ್ತಿದ್ದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಜೀವನ ನಡೆಸಲು ಸಾಧ್ಯಗುತ್ತಿಲ್ಲ ಎಂದರು.
ಜಾತಿ ಗಣತಿ ವರದಿ ಬಿಡುಗಡೆ ಮಾಡಿ ಎಲ್ಲ ಜಾತಿ ವರ್ಗದವರಿಗೂ ಸಮಾನ ಅವಕಾಶ ನೀಡಬೇಕೆಂಬುದು ನಮ್ಮ ಸರ್ಕಾರದ ಉದ್ದೇಶ. ಈ ವರದಿ ಎಲ್ಲಿಯೂ ಸೋರಿಕೆಯಾಗಿಲ್ಲ. ಎಷ್ಟೋ ದಿನಗಳ ಹಿಂದೆಯೇ ಜಾತಿ ಗಣತಿ ವರದಿ ಜಾರಿಗೆ ಬರಬೇಕಿತ್ತು. ಇದೀಗ ವರದಿ ಬಿಡುಗಡೆಗೆ ಕಾಲ ಕೂಡಿ ಬಂದಿದೆ. ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.