ತುಮಕೂರು: ಕಾಂಗ್ರೆಸ್ನ ಆಂತರಿಕ ಕಲಹವು ಈಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರ ಮೇಲೆ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಭೂಮಿ ಹಂಚಿಕೆ ಆರೋಪಗಳು ಕೇಳಿಬಂದಿದ್ದು, ಇದು ಅವರ ಸ್ಥಾನಕ್ಕೆ ಒತ್ತಡವನ್ನುಂಟು ಮಾಡಿದೆ.
ಈ ಆರೋಪದಿಂದಾಗಿ ವಿಪಕ್ಷಗಳು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿವೆ. ಇದರ ನಡುವೆ ಸಿಎಂ ಸಿದ್ದರಾಮಯ್ಯ ಇಲ್ಲದಿದ್ರೆ ನಾನು ರಾಜಕೀಯ ಬಿಡುತ್ತೀನಿ ಎಂದು ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಇರೊದ್ರಿಂದಲೇ ನಾನು ರಾಜಕಾರಣ ಮಾಡುತ್ತಿರುವುದು. ನನ್ನ ಪ್ರಕಾರ ಕಾಂಗ್ರೆಸ್ನಲ್ಲಿ ಮೂರು ಪವರ್ ಸೆಂಟರ್ ಇದೆ. ಹೈಕಮಾಂಡ್ , ಕೆಪಿಸಿಸಿ ಅಧ್ಯಕ್ಷ, ಹಾಗೂ ಸಿಎಂ ಮೂವರು ಪವರ್ ಸೆಂಟರ್ ಇದೆ. ಸಿಎಂ ಬದಲಾವಣೆ ಅನ್ನೋದನ್ನು ಕಾಲ ನಿರ್ಣಯ ಮಾಡಲಿದೆ.
ಕೆಲ ಮಾಧ್ಯಮದವರು ರಾಜಣ್ಣನವರು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ನಾನು ಯಾವತ್ತೂ ಸಿಎಂ ಸಿದ್ದರಾಮಯ್ಯರ ಜೊತೆ ಇದ್ದೇನೆ. ಇವತ್ತೂ, ನಾಳೆ, ಯಾವತ್ತೂ ನಾನು ಸಿದ್ದರಾಮಯ್ಯ ಬಣ ಎಂದರು.
ಆಗಸ್ಟ್- ಸೆಪ್ಟೆಂಬರ್ ಕ್ರಾಂತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕ್ರಾಂತಿ ಎಂದರೆ ಹಸಿರು ಕ್ರಾಂತಿಯೂ ಆಗಬಹುದು ಅಲ್ವಾ? ಬರೀ ಕಾಂಗ್ರೆಸ್ನಲ್ಲಿ ಮಾತ್ರ ಕ್ರಾಂತಿ ಎಂದು ಯಾಕೆ ಭಾವಿಸುತ್ತೀರಾ? ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ.
ಕೇಂದ್ರದಲ್ಲೂ ಕ್ರಾಂತಿ ಆಗಬಹುದು. ಬಿಜೆಪಿಯಲ್ಲೂ 75 ವರ್ಷದ ನಂತರ ಹುದ್ದೆಯಿಂದ ಕೆಳಗೆ ಇಳಿಬೇಕು. 75 ವರ್ಷ ಆದ ಕಾರಣ ಅಡ್ವಾಣಿಯನ್ನು ಪ್ರಧಾನಿ ಹುದ್ದೆಯಿಂದ ತಪ್ಪಿಸಿದರು, ಅಲ್ಲೂ ಕ್ರಾಂತಿ ಆಗಬಹುದು. ರಾಜಕಾರಣ ಬದಲಾವಣೆಯ ನಿಯಮ ಹೊಂದಿದೆ. ಯಾವ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು.