ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಇಲಾಖೆ ಕಲಬೆರಕೆ ಆಹಾರಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಕಳೆದ ತಿಂಗಳು ಪನ್ನೀರು, ಐಸ್ ಕ್ರೀಂ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಲಾಗಿತ್ತು. ಬರೋಬ್ಬರಿ 230 ಪನ್ನೀರ್ ಸ್ಯಾಂಪಲ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 30 ಮಾದರಿ ಪನ್ನೀರು ಸುರಕ್ಷಿತ, ಎರಡು ಮಾದರಿ ಪನ್ನೀರಿ ಸುರಕ್ಷಿತವಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈ ಮಾರ್ಚ್ ನಲ್ಲಿ 1,891 ಔಷಧಿ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 1,298 ಉತ್ತಮ ಗುಣಮಟ್ಟದ ಔಷಧಿಗಳೆಂದು ಧೃಡಪಟ್ಟಿವೆ. 41 ಅನುತ್ತಮ ಎಂದು ಗೊತ್ತಾಗಿದೆ. ಮಾರ್ಚ್ ತಿಂಗಳಲ್ಲಿ 18 ಕೇಸ್ ಗಳನ್ನು ಹಲವು ಕಂಪನಿಗಳ ಮೇಲೆ ಹಾಕಿದ್ದೇವೆ. ರಿಂಗಲ್ ಲ್ಯಾಕ್ಟೇಟ್ ದ್ರಾವಣದ 196 ಮಾದರಿಗಳನ್ನು ಲ್ಯಾಬ್ ಗೆ ಕಳಿಸಲಾಗಿದ್ದು. 113 ಮಾದರಿಗಳು ಅನುತ್ತಮ ಎಂದು ಘೋಷಣೆಯಾಗಿದೆ ಎಂದಿದ್ದಾರೆ.
ಕರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣ ಬಳಕೆ ಖಚಿತಪಡಿಸಿಕೊಳ್ಳಲು 115 ಮಾದರಿಗಳನ್ನು ವಿಶ್ಲೇಷಣೆ ಮಾಡಿದ್ದೇವೆ ಎಂದಿದ್ದಾರೆ. ಮಾರ್ಚ್ ನಲ್ಲಿ ಒಟ್ಟಾರೆ 3,204 ಆಹಾರ ಪದಾರ್ಥಗಳ ವಿಶ್ಲೇಷಣೆ ಮಾಡಲಾಗಿದೆ. 590 ಹೋಟೆಲ್ ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಲಾಗಿದ್ದು, 214 ಹೋಟೆಲ್ ರೆಸ್ಟೋರೆಂಟ್ ಗಳಿಗೆ ನೋಟಿಸ್ ಕೊಡಲಾಗಿದೆ. 11 ಹೋಟೆಲ್ ಗಳಿಗೆ 1,15,000 ರೂ ದಂಡ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಐಸ್ ಕ್ರೀಂ ತಯಾರಿಕ ಘಟಕಗಳಲ್ಲಿ ಲೋಪ ಕಂಡು ಬಂದ ಹಿನ್ನೆಲೆ 92 ಐಸ್ ಕ್ರೀಂ ಘಟಕಗಳಿಗೆ ನೋಟೀಸ್ ನೀಡಲಾಗಿದ್ದು, 6 ಐಸ್ ಕ್ರೀಂ ಘಟಕಕ್ಕೆ 38 ಸಾವಿರ ದಂಡ ವಿಧಿಸಲಾಗಿದೆ. ಇನ್ನು, 43 ಮಾದರಿ ಕೋವಾ ಸಂಗ್ರಹ ಮಾಡಿ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ಕೋವಾ 3 ಕಳಪೆ ಗುಣಮಟ್ಟ, 6 ಮಾದರಿ ಅಸುರಕ್ಷಿತ ಎಂದು ತಿಳಿದು ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.