ಇಸ್ಲಾಮಾಬಾದ್: ಪಹಲ್ಗಾಮ್ ದಾಳಿಯ ನಂತರ ಭಾರತ ಸರ್ಕಾರ ಪಾಕಿಸ್ತಾನದ ಮೇಲೆ ಕಠಿಣ ನಿರ್ಧಾರ ತಾಳಿದೆ. ಉರಿ ಸೇನಾ ಕ್ಯಾಂಪ್, ಪುಲ್ವಾಮಾ ದಾಳಿ ಸಂದರ್ಭದಲ್ಲಿ ಭಾರತೀಯ ಸೇನೆ ದೊಡ್ಡ ಮೊಟ್ಟದಲ್ಲೇ ಪ್ರತೀಕಾರ ತೀರಿಸಿಕೊಂಡಿತ್ತು. ಇಷ್ಟಾದರೂ ಬುದ್ಧಿಕಲಿಯದ ಉಗ್ರ ಪೋಷಕನಿಗೆ ಸರಿಯಾದ ಪಾಠ ಕಲಿಸಲು ಭಾರತ ಮುಂದಾಗಿದೆ.
ಈ ತಂತ್ರದ ಪ್ರಮುಖ ಅಂಶವೇ ಸಿಂಧೂ ಜಲ ಒಪ್ಪಂದ ತಾತ್ಕಾಲಿಕವಾಗಿ ಅಮಾನತು ಮಾಡೋದು. ಅಂತೆಯೇ ಸಭೆಯಲ್ಲಿ ತಾತ್ಕಾಲಿಕವಾಗಿ ಒಪ್ಪಂದವನ್ನು ಅಮಾನತಿನಲ್ಲಿಡಲು ನಿರ್ಧರಿಸಲಾಗಿದೆ. ಇದನ್ನು ಕೇಳಿರುವ ಪಾಕ್ ಬುಡಕ್ಕೆ ಬೆಂಕಿ ಬಿದ್ದಂತೆ ವರ್ತಿಸಲು ಶುರುಮಾಡಿದೆ.
ಇದರ ಬೆನ್ನಲ್ಲೇ ಸಿಂಧೂ ನಮ್ಮದು. ಅದು ನಮ್ಮದೇ ಆಗಿರುತ್ತದೆ ಎಂದು ನಾನು ಭಾರತಕ್ಕೆ ಹೇಳಲು ಬಯಸುತ್ತೇನೆ. ನಮ್ಮ ನೀರು ಅದರ ಮೂಲಕ ಹರಿಯುತ್ತದೆ. ಇಲ್ಲದಿದ್ದರೆ ಅವರ ರಕ್ತ ಹರಿಯುತ್ತದೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ನಾಲಿಗೆ ಹರಿಬಿಟ್ಟಿದ್ದಾರೆ.
ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಭುಟ್ಟೋ, ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಮಾರಕ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತದ ವಿರುದ್ಧ ಭುಟ್ಟೋ ಮಾತನಾಡಿದ್ದಾರೆ.
ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಬಲಿಪಶು ಮಾಡಲಾಗುತ್ತಿದೆ. ಆ ಮೂಲಕ ಭಾರತ ತನ್ನ ಆಂತರಿಕ ಭದ್ರತಾ ಲೋಪಗಳಿಂದ ಗಮನವನ್ನು ಬೇರೆಡೆ ಸೆಳೆಯುತ್ತಿದೆ ಎಂದು ಆರೋಪಿಸಿದ್ದಾರೆ.