ಶತ್ರುರಾಷ್ಟ್ರ ಪಾಕಿಸ್ತಾನದ ಮೇಲೆ ಭಾರತೀಯ ಸೇನಾ ದಾಳಿ ಮುಂದುವರೆದಿದೆ. ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತ್ರೀ ಮಾಡಿದೆ. ಭಾರತದ ದಾಳಿಗೆ ಪತರುಗುಟ್ಟಿರುವ ಪಾಕ್ ಸೇನೆಯ ಪುಂಡಾಟ ಮುಂದುವರೆದಿದ್ದು, ಎಲ್‌ಒಸಿ ಗಡಿದಾಟಿ ಭಾರತದ ಮೇಲೆ ದಾಳಿ ಪ್ರಯತ್ನ ಮಾಡಿ ವಿಫಲಗೊಂಡಿದೆ. ಪಾಕ್ ದಾಳಿ ಬೆನ್ನಲ್ಲೇ ಭಾರತ ಸೇನೆ ಪ್ರತ್ಯುತ್ತರ ಕೊಟ್ಟಿದೆ. ಸದ್ಯ ಈ ಎರಡು ದೇಶ ನಡುವೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಒಂದ್ಕಡೆ ಬಿಸಿಸಿಐ ಐಪಿಎಲ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಇದರ ಬೆನ್ನಲ್ಲೇ ಕಮಲ್ ಹಾಸನ್ ಕೂಡ ದೇಶಕ್ಕಾಗಿ ಆ ಧೃಡ ನಿರ್ಧಾರ ತೆಗೆದುಕೊಂಡಿದ್ದಾರೆ.
ತಮಿಳು ಚಿತ್ರರಂಗದ ಉಳಗನಾಯಗನ್ ಕಮಲ್ ಹಾಸನ್ ಥಗ್ಸ್ ಲೈಫ್ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮುಂದೂಡಿದ್ದಾರೆ. ಭಾರತ ಪಾಕ್ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಪೋಸ್ಟ್ ಪೋನ್ ಮಾಡಿದೆ. ದೇಶದಲ್ಲಿ ಯುದ್ದದ ವಾತಾವರಣವಿದ್ದು, ಈ ಸಂದರ್ಭದಲ್ಲಿ ನಮ್ಮ ದೇಶಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಈ ನಿರ್ಧಾರ ಮಾಡಿದ್ದಾರೆ.
ಚೆನ್ನೈನಲ್ಲಿ ಇದೇ ತಿಂಗಳ 16ರಂದು ಥಗ್ ಲೈಫ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಂದೂಡಿರುವ ಬಗ್ಗೆ ಪತ್ರ ಬರೆದಿರುವ ಅವರು, ಭಾರತ ಮೊದಲು, ನಂತರ ಕಲೆ. ದೇಶದ ಸೈನಿಕರು ಗಡಿಯಲ್ಲಿ ನಿಂತು ಹೋರಾಡುತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ಸಂಭ್ರಮಾಚರಣೆ ಮಾಡುವ ಸಮಯವಲ್ಲ. ಹೀಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಥಗ್ ಲೈಫ್ ಸಿನಿಮಾಗೆ ಮಣಿರತ್ನಂ ಆಕ್ಷನ್ ಕಟ್ ಹೇಳಿದ್ದಾರೆ. ಕಮಲ್ ಹಾಸನ್, ತ್ರಿಷಾ ಕೃಷ್ಣನ್, ಸಿಂಭು ನಟಿಸಿದ್ದು, ಕಮಲ್ ಹಾಸನ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಮಲ್ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.