ನವದೆಹಲಿ: ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಉಗ್ರರ ದಾಳಿ ಬಳಿಕ ಭಾರತ ಮತ್ತೊಂದು ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದೆ. ಹಲವು ದಿಟ್ಟ ನಿರ್ಧಾರಗಳಲ್ಲಿ ಭಾರತದಲ್ಲಿರುವ ಪಾಕ್ ಪ್ರಜೆಗಳಿಗೆ ಗೇಟ್ ಪಾಸ್ ಕೊಡುವುದು ಬಹಳ ಮುಖ್ಯವಾಗಿದೆ. ದೇಶದಲ್ಲಿ ಅಡಗಿರುವ ಪಾಕ್ ನಾಗರಿಕರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲು ತಾಕೀತು ಮಾಡಲಾಗಿದೆ.
ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನಗಳೆರಡರ ನಡುವಿನ ಸಂಬಂಧ ಹಳಸಿದೆ. ಇದೀಗ ಭಾರತದಲ್ಲಿ ಪಾಕಿಸ್ತಾನೀಯರ ವೀಸಾ ರದ್ದುಗೊಳಿಸಲು ಆದೇಶಿಸಲಾಗಿದೆ ಹಾಗೂ ಪಾಕಿಸ್ತಾನಿ ಪ್ರಜೆಗಳಿಗೆ ಭಾರತದೊಳಗೆ ಪ್ರವೇಶ ನಿಷೇಧಿಸಲಾಗಿದೆ. ಈಗಾಗಲೇ ಬೇರೆ ಬೇರೆ ರಾಜ್ಯದಲ್ಲಿರುವ ಪಾಕಿಸ್ತಾನಿ ಪ್ರಜೆಗಳ ವೀಸಾಗಳನ್ನು ರದ್ದುಮಾಡಿ ವಾಪಾಸ್ ಕಳುಹಿಸಲು ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.
ಭಾರತದಲ್ಲಿ ಪಾಕಿಸ್ತಾನದ 14,000 ಪ್ರಜೆಗಳು ಇರಬಹುದೆಂದು ಅಂದಾಜು ಮಾಡಲಾಗಿದೆ. ಭಾರತ ಸರ್ಕಾರ ವಾರ್ಷಿಕ 1.5-2 ಲಕ್ಷ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನೀಡುತ್ತದೆ. ವಿವಿಧ ಉದ್ದೇಶಗಳಿಗಾಗಿ ಪಾಕ್ ಪ್ರಜೆಗಳಿಗೆ ಭಾರತ ವೀಸಾ ನೀಡುತ್ತದೆ. ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಲು ವಿಸಿಟರ್ ವೀಸಾ ನೀಡಲಾಗುವುದು. ಕಾನೂನು ಉದ್ದೇಶಗಳಿಗಾಗಿಯೂ ವಿಸಿಟರ್ ವೀಸಾ ನೀಡಲಾಗುವುದು. ಪಾಕಿಸ್ತಾನದ ಪ್ರಜೆಗಳಿಗೆ ಭಾರತಕ್ಕೆ ಪ್ರವಾಸಿ ವೀಸಾಗೆ ಅವಕಾಶವಿಲ್ಲ.
ಪ್ರವಾಸಿ ವೀಸಾ ಬದಲು ವಿಸಿಟರ್ ವೀಸಾಗೆ ಅರ್ಜಿ ಸಲ್ಲಿಸ ಬೇಕಾಗುತ್ತದೆ. ಈ ವಿಸಿಟರ್ ವೀಸಾ ಅವಧಿ ಸಾಮಾನ್ಯವಾಗಿ 3 ತಿಂಗಳು ಮಾನ್ಯವಾಗಿರುತ್ತದೆ. ವ್ಯಾಪಾರ ಸಭೆ, ಕಾರ್ಯಕ್ರಮಗಳಿಗಾಗಿ ವ್ಯಾಪಾರ ವೀಸಾ ನೀಡಲಾಗುತ್ತದೆ. ಪಾಕಿಸ್ತಾನ ಕಂಪನಿ, ಸಂಸ್ಥೆಯಿಂದ ಆಹ್ವಾನ ಪತ್ರಿಕೆ ಲಗತ್ತಿಸಬೇಕಿರುತ್ತದೆ. ವ್ಯಾಪಾರ ವೀಸಾ 6 ತಿಂಗಳವರೆಗೆ ಬಹು ಪ್ರವೇಶಕ್ಕೆ ಅವಕಾಶವಿರುತ್ತದೆ. ಸಮ್ಮೇಳನ ಅಥವಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಮ್ಮೇಳನ ವೀಸಾ ನೀಡಲಾಗುತ್ತದೆ.
ಭಾರತದಲ್ಲಿ ಚಿಕಿತ್ಸೆ ಪಡೆಯಲು ಪಾಕ್ ಪ್ರಜೆಗಳಿಗೆ ವೈದ್ಯಕೀಯ ವೀಸಾ ನೀಡಲಾಗುತ್ತದೆ. ವೈದ್ಯಕೀಯ ದಾಖಲೆ, ಆಸ್ಪತ್ರೆಯಿಂದ ಶಿಫಾರಸು ಪತ್ರ ನೀಡಿದರೆ ಈ ವೀಸಾ ನೀಡಲಾಗುವುದು. ಪಾಕಿಸ್ತಾನದ ಪ್ರಜೆಗಳಿಗೆ ಭಾರತ ಸರ್ಕಾರ ವೈದ್ಯಕೀಯ ವೀಸಾ ನೀಡಲಿದೆ. ಧಾರ್ಮಿಕ ಕಾರ್ಯಕ್ರಮಕ್ಕಾಗಿ ಸಿಖ್ಖರು ಯಾತ್ರಾರ್ಥಿ ವೀಸಾ ಪಡೆಯುತ್ತಾರೆ. ಭಾರತದ ಮೂಲಕ 3ನೇ ದೇಶಕ್ಕೆ ತೆರಳಲು ಟ್ರಾನ್ಸಿಟ್ ವೀಸಾ ನೀಡಲಾಗುವುದು.