ಹೊಸಪೇಟೆ:- “ತುಂಗಭದ್ರಾ ಅಣೆಕಟ್ಟಿನ ಹೂಳು ತೆಗೆಯುವುದು ಕಾರ್ಯಸಾಧುವಲ್ಲ. ಇದರ ಬದಲಾಗಿ ನವಲಿ ಬಳಿ ಸಮನಾಂತರ ಅಣೆಕಟ್ಟು ನಿರ್ಮಾಣ ಅಥವಾ ನಮ್ಮ ಪಾಲಿನ 27 ರಿಂದ 30 ಟಿಎಂಸಿ ನೀರನ್ನು ಬಸವಸಾಗರದಿಂದ ಪಂಪ್ ಮಾಡಿ ಮೇಲಿನ ಕೆರೆಗಳನ್ನು ತುಂಬಿಸುವ ಬಗ್ಗೆ ರಾಜ್ಯದ ತಾಂತ್ರಿಕ ಸಮಿತಿ ವರದಿ ನೀಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: DCM ಡಿ.ಕೆ.ಶಿವಕುಮಾರ್!
ರಾಜ್ಯ ಸರಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆ ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಮೇ 20 ರಂದು ಹಮ್ಮಿಕೊಂಡಿರುವ ಸಾಧನಾ ಸಮಾವೇಶದ ಪೂರ್ವ ಸಿದ್ಧತೆಯನ್ನು ಡಿಸಿಎಂ ಡಿ.ಕೆ. ಶಿವಕುಮಾರ ಅವರು ಶುಕ್ರವಾರ ಪರಿಶೀಲಿಸಿದರು. ಬಳಿಕ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದರು.
“ಈ ಪ್ರಸ್ತಾವನೆಯನ್ನು ತುಂಗಭದ್ರಾ ನಿಗಮದ ಮುಂದಿಟ್ಟಿದ್ದೇವೆ. ಇದರ ಬಗ್ಗೆ ಚರ್ಚೆ ನಡೆಸಲು ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಸಮಯ ಕೇಳಿದ್ದೇನೆ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಇನ್ನು ಸಮಯ ನೀಡಿಲ್ಲ. ಈ ಭಾಗದ ಜನರಿಗೆ ನವಲಿ ಅಣೆಕಟ್ಟು ಕಟ್ಟುವುದಾಗಿ ನಾವು ಬಜೆಟ್ ಅಲ್ಲಿ ಪ್ರಸ್ತಾವನೆ ಮಾಡಿದ್ದೆವು” ಎಂದರು.
ತುಂಗಭದ್ರಾ ಅಣೆಕಟ್ಟಿನ ಗೇಟ್ ಬದಲಾವಣೆ ವಿಚಾರವಾಗಿ ಕೇಳಿದಾಗ, “ಎಲ್ಲಾ ಗೇಟ್ ಗಳನ್ನು ಬದಲಾವಣೆ ಮಾಡುವ ಬಗ್ಗೆ ತೀರ್ಮಾನ ಮಾಡಲಾಗಿದೆ. ಏನು ತೀರ್ಮಾನ ಮಾಡಲಾಗಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಯಾವುದೇ ಕೆಲಸ ಮಾಡಬೇಕು ಎಂದರು ತಾಂತ್ರಿಕ ಸಮಿತಿಯಿಂದ ವರದಿ ಪಡೆಯಬೇಕು. ಏಕಾಏಕಿ ನಡೆಸಲು ಆಗುವುದಿಲ್ಲ. ತುಂಗಭದ್ರಾ ಬೋರ್ಡ್ ನಿಂದಲೇ ಇದು ತೀರ್ಮಾನವಾಗಬೇಕು. ನಾವೋಬ್ಬರೇ ತೀರ್ಮಾನ ಮಾಡಲು ಆಗುವುದಿಲ್ಲ. ಮೂರು ರಾಜ್ಯಗಳು ಸೇರಿ ಇದನ್ನು ಮಾಡಬೇಕು. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ಚರ್ಚೆ ನಡೆಸಲಾಗುವುದು. ತೆಲಂಗಾಣದವರಿಗೆ ಈ ಬಗ್ಗೆ ತಿಳಿಸಿದ್ದು ಅವರೂ ಸಹ ಚರ್ಚೆ ನಡೆಸುತ್ತಿದ್ದಾರೆ” ಎಂದರು.
ಕಳಸಾ ಬಂಡೂರಿ ವಿಚಾರದಲ್ಲಿ ನಮ್ಮ ಪರವಾಗಿ ವರದಿ ಬಂದಿರುವ ಬಗ್ಗೆ ಕೇಳಿದಾಗ, “ನಾನೇ ಕಳೆದ ವಾರ ಖುದ್ದಾಗಿ ನಾಲ್ಕು ಜನ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೆ. ಕೇಂದ್ರ ಅರಣ್ಯ ಸಚಿವರು ನಮ್ಮ ಅಧಿಕಾರಿಗಳನ್ನು ಅಲ್ಲಿಯೇ ಇರಿಸಿಕೊಂಡು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದ್ದರು” ಎಂದರು.
*ಒಂದು ಲಕ್ಷ ಪಟ್ಟಾ ಖಾತೆ ಹಂಚಿಕೆ*
“ಕಾಂಗ್ರೆಸ್ ಸರ್ಕಾರಕ್ಕೆ ಎರಡು ವರ್ಷದ ಸಂಭ್ರಮ. ಈ ಕಾರಣಕ್ಕೆ ಕಂದಾಯ ಭೂಮಿಯಲ್ಲಿ ವಾಸ ಮಾಡುತ್ತಿರುವ ಲಂಬಾಣಿ, ಗೊಲ್ಲ ಸಮುದಾಯ ಸೇರಿದಂತೆ ಇತರೇ ಸಮುದಾಯಗಳ 1 ಲಕ್ಷ ಜನರಿಗೆ ಪಟ್ಟಾ ಖಾತೆಗಳನ್ನು ಹಂಚಿಕೆ ಮಾಡಲಾಗುವುದು. ಪಟ್ಟಾ ಸ್ವೀಕಾರ ಮಾಡುವ 50 ಸಾವಿರ ಜನರನ್ನು ಹತ್ತಿರದ ಮೂರು ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಹ್ವಾನ ಮಾಡುತ್ತಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಲಿದ್ದಾರೆ” ಎಂದು ಹೇಳಿದರು.
“ಅಧಿಕಾರಿಗಳ ಸಭೆ ನಡೆಸಿ ಮುನ್ನೋಟವನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದಕ್ಕಾಗಿ ಉಸ್ತುವಾರಿ ನಡೆಸಲು ಮಂತ್ರಿಗಳು ಹಾಗೂ ಹಿರಿಯ ಶಾಸಕರಿಗೆ ಜವಾಬ್ದಾರಿ ನೀಡಲಾಗಿದೆ. ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಸರ್ಕಾರಕ್ಕೆ ಪಕ್ಷ ಬೆಂಬಲವಾಗಿದ್ದುಕೊಂಡು ಕಾರ್ಯಕ್ರಮ ನಡೆಸಲಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ಅವರು, ರಣದೀಪ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ರಾಜ್ಯದ ಎಲ್ಲಾ ಮಂತ್ರಿ ಮಂಡಲದ ಸದಸ್ಯರು, ಎಲ್ಲಾ ಪಕ್ಷಗಳ ಸದಸ್ಯರಿಗೂ ಆಹ್ವಾನ ನೀಡಲಾಗಿದೆ” ಎಂದರು.
“ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಸಹ ನಮ್ಮ ರಾಜ್ಯದ ಜನ ಡಬಲ್ ಎಂಜಿನ್ ಸರ್ಕಾರಕ್ಕೆ ಅವಕಾಶ ನೀಡದೆ ನಮ್ಮ ಮೇಲೆ ನಂಬಿಕೆಯನ್ನಿಟ್ಟರು. ನಾವು ಈ ಎರಡು ವರ್ಷದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಈ ಭಾಗಕ್ಕೆ ಹೆಚ್ಚಿನ ಶಕ್ತಿ ನೀಡಲು ಈ ಎರಡು ವರ್ಷದ ಸಂಭ್ರಮವನ್ನು ಮೇ.20 ರಂದು ವಿಜಯನಗರದಲ್ಲಿ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.
“ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳನ್ನು ಪೂರೈಸುತ್ತಿದೆ. 2023 ಮೇ 13 ರಂದು ಈ ರಾಜ್ಯದ ಜನ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸವನ್ನಿಟ್ಟು 136 ಜನರನ್ನು ಗೆಲ್ಲಿಸಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರು. ಉಪಚುನಾವಣೆ ಸೇರಿ ನಮ್ಮ ಬಲ 138 ಕ್ಕೆ ಏರಿದೆ. ಪಕ್ಷೇತರರ ಬೆಂಬಲ ಸೇರಿ 140 ಜನ ಶಾಸಕರ ಬೆಂಬಲ ಇರುವಂತಹ ಅತ್ಯಂತ ಬಲಿಷ್ಠ ಸರ್ಕಾರ” ಎಂದು ನುಡಿದರು.
*ನಾಗೇಂದ್ರ ಅವರು ಸಮರ್ಥರಿದ್ದಾರೆ*
ನಾಗೇಂದ್ರ ಅವರು ಮತ್ತೆ ಸಚಿವರಾಗುತ್ತಾರೆಯೇ ಎಂದು ಕೇಳಿದಾಗ, “ಅವರು ಸಂಪೂರ್ಣವಾಗಿ ಸಮರ್ಥರಿದ್ದಾರೆ” ಎಂದು ಹೇಳಿದರು.
ಸ್ಥಳೀಯ ಮಟ್ಟದ ಪಕ್ಷದ ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ ಮೂಡಿರುವ ಬಗ್ಗೆ ಕೇಳಿದಾಗ, “ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇಲ್ಲಿ ವ್ಯಕ್ತಿಪೂಜೆಯಿಲ್ಲ, ಪಕ್ಷದ ಪೂಜೆ ಮಾತ್ರ. ಜಿಲ್ಲೆಯಲ್ಲಿ ಯಾವ ಬಣವೂ ಇಲ್ಲ. ನಮ್ಮದು ಕಾಂಗ್ರೆಸ್ ಒಂದೇ ಬಣ. ಮಾಧ್ಯಮದವರು ಹೇಳುತ್ತೀರಿ ಎಂದರೆ ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ” ಎಂದರು.
ಕೆಎಂಎಫ್ ಅಧ್ಯಕ್ಷರಾದ ಭೀಮಾನಾಯ್ಕ್ ಅವರು ಮಾದಿಗ ಸಮುದಾಯಕ್ಕೆ ಅಪಮಾನ ಮಾಡಿ ಮಾತನಾಡಿದ್ದಾರೆ ಎಂದು ಕೇಳಿದಾಗ, “ಈ ಬಗ್ಗೆ ವಿಚಾರಿಸುತ್ತೇನೆ” ಎಂದು ಉತ್ತರಿಸಿದರು.
ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ ಬಗ್ಗೆ ಕೇಳಿದಾಗ, “ಖಾಸಗಿಯವರು ಬೇಕಾದರೆ ಮಾಡಲಿ. ಸರ್ಕಾರದವರು ಮಾಡಲು ತಯಾರಿಲ್ಲ” ಎಂದರು.
ವಿಜಯನಗರ, ಬಳ್ಳಾರಿ ಜಿಲ್ಲೆಗೆ ಸರಿಯಾದ ಉಸ್ತುವಾರಿ ಸಚಿವರು ಇಲ್ಲದಿರುವ ಬಗ್ಗೆ ಕೇಳಿದಾಗ, “ಯಾರೂ ಇದರ ಬಗ್ಗೆ ಗಮನಕ್ಕೆ ತಂದಿರಲಿಲ್ಲ. ಈಗ ಇದರ ಕುರಿತು ವಿಚಾರ ನಡೆಸುವೆ” ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಅವರು ಭಯೋತ್ಪಾದಕರ ನೆಲೆಯ ಮೇಲೆ ಮಾಡಿರುವ ದಾಳಿಯನ್ನು ಬೂಟಾಟಿಕೆ ಎಂದು ಕರೆದಿರುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ಮಾಹಿತಿ ಪಡೆದು ಮಾತನಾಡುತ್ತೇನೆ” ಎಂದರು.