2025ರ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಗಾಯದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬಲ ತೊಡೆಯ ಸ್ನಾಯುವಿನ ಗಾಯದಿಂದ ಬಳಲುತ್ತಿರುವ ಪಡಿಕ್ಕಲ್ ಈ ಋತುವಿನಲ್ಲಿ 10 ಪಂದ್ಯಗಳಲ್ಲಿ ಎರಡು ಅರ್ಧಶತಕಗಳ ಸಹಾಯದಿಂದ 247 ರನ್ ಗಳಿಸಿದ್ದರು. ಅವರ ಬದಲಿಗೆ ಆರ್ಸಿಬಿ ಈಗ ಅನುಭವಿ ಬ್ಯಾಟರ್ ಮಯಾಂಕ್ ಅಗರವಾಲ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ
ಇದೀಗ ಅವರ ಬದಲಿಗೆ ಕನ್ನಡಿಗ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. ಮಯಾಂಕ್ ಅಗರ್ವಾಲ್ 12 ವರ್ಷಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. ಅದರಲ್ಲೂ ಅವರು ಐಪಿಎಲ್ ಕೆರಿಯರ್ ಆರಂಭಿಸಿದ್ದು ಆರ್ಸಿಬಿ ಪರ ಕಣಕ್ಕಿಳಿಯುವ ಮೂಲಕ ಎಂಬುದು ವಿಶೇಷ. 2011 ರಲ್ಲಿ ಮಯಾಂಕ್ ಅಗರ್ವಾಲ್ ಆರ್ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು.
ಮೊದಲ ಸೀಸನ್ನಲ್ಲಿ 8 ಪಂದ್ಯಗಳನ್ನಾಡಿದ್ದ ಮಯಾಂಕ್ 141 ರನ್ ಕಲೆಹಾಕಿದ್ದರು. ಹೀಗಾಗಿ ಅವರನ್ನು 2012 ರಲ್ಲೂ ತಂಡದಲ್ಲೇ ಉಳಿಸಲಾಗಿತ್ತು. ಅದರಂತೆ 2012 ರಲ್ಲಿ 16 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದ ಅವರು ಒಟ್ಟು 216 ರನ್ ಬಾರಿಸಿದ್ದರು. ಇನ್ನು 2013 ರಲ್ಲೂ ಆರ್ಸಿಬಿ ಪರ ಕಣಕ್ಕಿಳಿದಿದ್ದ ಮಯಾಂಕ್ 5 ಪಂದ್ಯಗಳಲ್ಲಿ ಕೇವಲ 67 ರನ್ ಮಾತ್ರ ಗಳಿಸಿದ್ದರು.
2013 ರಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಪರಿಣಾಮ ಮರು ವರ್ಷವೇ ಮಯಾಂಕ್ ಅಗರ್ವಾಲ್ ಅವರನ್ನು ಆರ್ಸಿಬಿ ತಂಡದಿಂದ ಕೈ ಬಿಟ್ಟಿತ್ತು. ಇದಾದ ಬಳಿಕ 2014 ರಿಂದ 2016ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. 2017 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡದಲ್ಲಿದ್ದ ಮಯಾಂಕ್ ಅವರು ಆ ಬಳಿಕ 2018 ರಿಂದ 2022 ರವರೆಗೆ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು.
2023 ಹಾಗೂ 2024 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಕಾಣಿಸಿಕೊಂಡಿದ್ದ ಮಯಾಂಕ್ ಅಗರ್ವಾಲ್ ಅವರನ್ನು ಈ ಬಾರಿಯ ಮೆಗಾ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಬದಲಿ ಆಟಗಾರನಾಗಿ ಕನ್ನಡಿಗ ಆರ್ಸಿಬಿ ತಂಡಕ್ಕೆ ರಿಎಂಟ್ರೆ ಕೊಟ್ಟಿದ್ದಾರೆ.