ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಎರಡು ರನ್ ಗಳಿಂದ ಗೆದ್ದು ಬೀಗಿತ್ತು.
ಮ್ಯಾಚ್ನಲ್ಲಿ ಟಾಸ್ ಗೆದ್ದ ಮಹೇಂದ್ರ ಸಿಂಗ್ ಧೋನಿ ಬೌಲಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ (62), ಜೇಕಬ್ ಬೆಥೆಲ್ (55) ಹಾಗೂ ರೊಮಾರಿಯೊ ಶೆಫರ್ಡ್ (53) ಅರ್ಧಶತಕ ಬಾರಿಸಿ ಮಿಂಚಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್ಸಿಬಿ ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು.
ಗುರಿಯನ್ನು ಬೆನ್ನತ್ತಿದ ಚೆನ್ಣೈ ಸೂಪರ್ ಕಿಂಗ್ಸ್ ಪರ ಆಯುಷ್ ಮ್ಹಾತ್ರೆ 94 ರನ್ ಬಾರಿಸಿದರೆ, ರವೀಂದ್ರ ಜಡೇಜಾ ಅಜೇಯ 77 ರನ್ ಸಿಡಿಸಿದ್ದರು. ಇದಾಗ್ಯೂ ಅಂತಿಮ ಓವರ್ನಲ್ಲಿ 15 ರನ್ಗಳ ಗುರಿ ಪಡೆದ ಸಿಎಸ್‌ಕೆ ತಂಡವು 2 ರನ್ನಿಂದ ಸೋಲೊಪ್ಪಿಕೊಂಡಿತು. ಈ ವಿರೋಚಿತ ಸೋಲನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಹಾಡಿ ಹೊಗಳಿದ್ದಾರೆ.
ಆರ್ಸಿಬಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಅತ್ಯುತ್ತಮ ಪ್ರದರ್ಶನ ನೀಡಿದೆ. ಇದಾಗ್ಯೂ ಸಿಎಸ್‌ಕೆ ಪಂದ್ಯವನ್ನು ಸೋತಿದ್ದು ದುರದೃಷ್ಟಕರ. ಒಟ್ಟಾರೆಯಾಗಿ ನೋಡುವುದಾದರೆ ಇದು ಈ ಸೀಸನ್ನಲ್ಲಿನ ಸಿಎಸ್‌ಕೆ ತಂಡ ಬೆಸ್ಟ್ ಫರ್ಫಾಮೆನ್ಸ್. ಹೀಗಾಗಿ ಈ ಸೋಲಿನ ಹೊರತಾಗಿಯೂ ಸಿಎಸ್‌ಕೆ ಉತ್ತಮ ಕ್ರಿಕೆಟ್ ಆಡಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಆರ್ಸಿಬಿ ತಂಡದ ಗೆಲುವಿಗೆ ಕಾರಣ ಅವರ ಬ್ಯಾಟಿಂಗ್. ಮೊದಲ ಇನಿಂಗ್ಸ್ನಲ್ಲಿ ಅವರು ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು. ಇತ್ತ ಸಿಎಸ್‌ಕೆ ತಂಡವು ಉತ್ತಮ ಪೈಪೋಟಿ ನೀಡಿದರೂ, ಕೊನೆಯ ಓವರ್ನಲ್ಲಿ ಸೋಲೊಪ್ಪಿಕೊಂಡಿದೆ. ಆದರೆ ಸಿಎಸ್‌ಕೆ ತಂಡವು ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.