ಲಕ್ನೋ ವಿರುದ್ಧ 37 ರನ್ ಗಳಿಂದ ಪಂಜಾಬ್ ಕಿಂಗ್ಸ್ ಗೆದ್ದು ಬೀಗಿದೆ. 11 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 15 ಅಂಕ ಪಡೆದಿರುವ ಪಂಜಾಬ್ ಪ್ಲೇ ಆಫ್ ಹಾದಿಯನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇತ್ತ 11 ಪಂದ್ಯಗಳಲ್ಲಿ ಕೇವಲ 5ರಲ್ಲಿ ಮಾತ್ರ ಗೆಲುವು ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲೇ ಉಳಿದಿದೆ. ಅಲ್ಲದೇ ಪ್ಲೇ ಆಫ್ ಹಾದಿ ಬಹುತೇಕ ಮುಚ್ಚಿದಂತಾಗಿದೆ.
ಪಂಜಾಬ್ ಕಿಂಗ್ಸ್ ನೀಡಿದ 237 ರನ್ ಗಳ ಗುರಿ ಬೆನ್ನಟ್ಟಿದ ಲಕ್ನೋಗೆ ಆರಂಭಿಕ ಆಘಾತ ಎದುರಾಯಿತು. ಮಾರ್ಕ್ರಮ್ 13 ರನ್ ಗಳಿಸಿ ಔಟಾದರೆ ಮಿಚೆಲ್ ಮಾರ್ಷ್ ಶೂನ್ಯಕ್ಕೆ ಔಟಾದರು. ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ನಿಕೋಲಸ್ ಪೂರನ್ ಸಹ 6 ರನ್ ಗಳಿಗೆ ಔಟಾಗಿದ್ದು ಲಕ್ನೋ ತೀವ್ರ ಹಿನ್ನಡೆಯಾಗುವಂತೆ ಮಾಡಿತು. ಆದರೆ ಆಯೂಷ್ ಬದೋನಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 74 ರನ್ ಗಳಿಸಿದ್ದು ತಂಡದ ಗೆಲುವಿಗೆ ಸಾಕಷ್ಟು ಪ್ರಯತ್ನಿಸಿದರು. ಆದರೆ ಲಕ್ನೋ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು.
ಪಂಜಾಬ್‌ಗೆ ಆರಂಭದಲ್ಲೇ ಪ್ರಿಯಾಂಶ್ ಆರ್ಯ (1) ವಿಕೆಟ್ ನಷ್ಟವಾಯಿತು. ಆದರೆ ಜೋಶ್ ಇಂಗ್ಲಿಷ್ (30) ಜೊತೆ ಸೇರಿದ ಪ್ರಭಸಿಮ್ರನ್ ತಂಡವನ್ನು ಮುನ್ನಡೆಸಿದರು. ವಿಕೆಟ್‌ನ ಒಂದು ತುದಿಯಿಂದ ನೆಲಕಚ್ಚಿ ಆಟವಾಡಿದ ಪ್ರಭಸಿಮ್ರನ್‌ಗೆ ನಾಯಕ ಶ್ರೇಯಸ್ ಅಯ್ಯರ್ ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಶ್ರೇಯಸ್ ಕೇವಲ 25 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು. ಅತ್ತ ಪ್ರಭಸಿಮ್ರನ್ ಎಸೆತಗಳಲ್ಲಿ ಅರ್ಧಶತಕ ಪೊರ್ಣಗೊಳಿಸಿದರು. ಇನಿಂಗ್ಸ್‌ನ ಕೊನೆಯಲ್ಲಿ ರನ್ ಗತಿ ಏರಿಸುವ ಭರದಲ್ಲಿ ಪ್ರಭಸಿಮ್ರನ್ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಶತಕ ಗಳಿಸುವ ಅವಕಾಶ ತಪ್ಪಿತು.