ಕ್ರಿಕೆಟ್ ಅಭಿಮಾನಿಗಳು ಹೆಚ್ಚು ಕಾತುರದಿಂದ ವೀಕ್ಷಿಸಲು ಸಜ್ಜಾಗಿರುವ ಚೆನ್ನೈ ಹಾಗೂ ಬೆಂಗಳೂರು ತಂಡದ ಪಂದ್ಯವು ಇಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿದೆ.
ಈ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಎರಡೂ ತಂಡಗಳು ಸ್ಟಾರ್ ಆಟಗಾರರ ಬಳಗವನ್ನೇ ಹೊಂದಿದ್ದು, ಈ ಪಂದ್ಯ ರೋಚಕ ಸ್ಪರ್ಧೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ. ಆರ್‌ಸಿಬಿ ತಂಡವನ್ನು ರಜತ್ ಪಾಟಿದಾರ್ ಮುನ್ನಡೆಸುತ್ತಿದ್ದರೆ, ಸಿಎಸ್‌ಕೆ ತಂಡವನ್ನ ರುತುರಾಜ್ ಗಾಯಕ್ವಾಡ್ ಅವರ ಕೈಯಲ್ಲಿದೆ. ಎರಡೂ ತಂಡಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ತಮ್ಮ ಸ್ಟಾರ್ ಆಟಗಾರರ ಮೂಲಕ ಪಂದ್ಯದಲ್ಲಿ ಮೇಲುಗೈ ಸಾಧಿಸಲು ತಂತ್ರ ರೂಪಿಸುತ್ತಿವೆ. ಚೆಪಾಕ್‌ನಲ್ಲಿ ಸಿಎಸ್‌ಕೆಗೆ ತವರು ಮೈದಾನದ ಲಾಭವಿದ್ದರೆ, ಆರ್‌ಸಿಬಿ ತನ್ನ ಆಕ್ರಮಣಕಾರಿ ಆಟದ ಮೂಲಕ ಸವಾಲು ಒಡ್ಡಲು ಸಜ್ಜಾಗಿದೆ.
ಇನ್ನು ಚೆಪಾಕ್‌ನಲ್ಲಿ ಆರ್‌ಸಿಬಿ vs ಸಿಎಸ್‌ಕೆ ರೆಕಾರ್ಡ್ ನೋಡುವುದಾದರೆ, ಸಿಎಸ್‌ಕೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಇಲ್ಲಿ ನಡೆದಿರುವ ಎರಡು ತಂಡಗಳ ನಡುವಿನ 9 ಪಂದ್ಯಗಳಲ್ಲಿ ಸಿಎಸ್‌ಕೆ 8ರಲ್ಲಿ ಜಯ ಸಾಧಿಸಿದ್ದರೆ, 1ರಲ್ಲಿ ಆರ್‌ಸಿಬಿ ಗೆದ್ದಿದೆ. ಆ ಏಕೈಕ ಗೆಲುವು 2008ರಲ್ಲಿ ಬಂದಿರುವುದು ಗಮನಾರ್ಹ. ಅಂದರೆ 16 ವರ್ಷಗಳಲ್ಲಿ ಆರ್‌ಸಿಬಿ ಒಂದೇ ಒಂದು ಗೆಲುವು ಸಾಧಿಸಿಲ್ಲ.
ಕಳೆದ ಐಪಿಎಲ್ ಋತುವಿನಲ್ಲಿ ಎರಡೂ ತಂಡಗಳು ತಲಾ ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದ್ದವು. ಆದರೆ, ಕೊನೆಯ ಮುಖಾಮುಖಿಯಲ್ಲಿ ಪ್ಲೇ ಆಫ್ ನಿರ್ಧರಿಸುವ ಪಂದ್ಯದಲ್ಲಿ ಆರ್‌ಸಿಬಿ 27 ರನ್ಗಳ ರೋಚಕ ಜಯ ಸಾಧಿಸಿತ್ತು. ಆದರೆ ಚೆಪಾಕ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸಿಎಸ್‌ಕೆ ಪ್ರಾಬಲ್ಯ ಸಾಧಿಸಿತ್ತು.
ಈ ಋತುವಿನಲ್ಲಿ ಎರಡೂ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಆರ್‌ಸಿಬಿ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಇತ್ತ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ತಂಡವನ್ನ 4 ವಿಕೆಟ್‌ಗಳಿಂದ ಸೋಲಿಸಿ ಎರಡು ಅಂಕಗಳನ್ನು ಗಳಿಸಿತ್ತು.