ಗದಗ:- ರಾಜ್ಯ ಸರಕಾರದಿಂದ ಜನಔಷಧಿ ಕೇಂದ್ರ ತೆರವು ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಕಾಡಾನೆ ದಾಳಿ: ಮಹಿಳೆ ಸ್ಥಳದಲ್ಲೇ ದುರ್ಮರಣ, ಮೃತರ ಕುಟುಂಬಕ್ಕೆ 20 ಲಕ್ಷ ಪರಿಹಾರ!
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜನೌಷಧ ಕೇಂದ್ರ ತೆರವು ಮಾಡಲು ರಾಜಕೀಯ ದುರುದ್ದೇಶವಿಲ್ಲ. ಹಿಂದೆಯೂ ನಾನು ಜನೌಷಧ ಕೇಂದ್ರ ಬೇಡ ಅಂತ ಹೇಳಿದ್ದೆ. ಸರ್ಕಾರವೇ ಉಚಿತವಾಗಿ ಔಷಧಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಆಸ್ಪತ್ರೆಯೊಳಗೆ ಮಾರಾಟ ಮಳಿಗೆ ಇರಬೇಕು ಎಂಬ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ. ಜನೌಷಧ ಕೇಂದ್ರಗಳು ಕಡಿಮೆ ದರದಲ್ಲಿ ಔಷಧ ಕೊಡುತ್ತವೆ ಎಂಬ ಒಳ್ಳೆಯ ಉದ್ದೇಶ ಇದ್ದರೂ, ಸರ್ಕಾರವೇ ಉಚಿತವಾಗಿ ನೀಡುತ್ತಿರುವಾಗ, ಸಾಮಾನ್ಯ ಜನರು ಮತ್ತೆ ಔಷಧಗಳನ್ನು ಖರೀದಿ ಮಾಡಬೇಕಾಗಿರುವ ಪರಿಸ್ಥಿತಿ ಉಂಟಾಗಬಾರದು ಎಂದು ಸಚಿವರು ತಿಳಿಸಿದರು.
ಮೆಡಿಸಿನ್ ಲಭ್ಯವಿಲ್ಲ ಎಂಬ ಕಾರಣಕ್ಕೆ ಜನ ಖಾಸಗಿ ಮಳಿಗೆಗಳಿಗೆ ಧಾವಿಸಬಾರದೆಂದು ಹೇಳಿದ ಸಚಿವರು, ನಮ್ಮ ವ್ಯವಸ್ಥೆ ಎಲ್ಲವನ್ನೂ ಫರ್ಪೆಕ್ಟ್ ಆಗಿ ಕೊಡಲ್ಲ ಎಂದು ಅರ್ಥವಲ್ಲ. ಇದನ್ನು ಸರ್ಕಾರದ ಗಮನಕ್ಕೆ ತರಬೇಕು. ವ್ಯವಸ್ಥೆಯೊಳಗಿನ ದೋಷಗಳನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.
ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ದುರಾಶೆಯಿಲ್ಲ. ಈ ತೀರ್ಮಾನ ಸಮಗ್ರವಾಗಿ ಪರಿಗಣಿಸಿ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಯ ಆವರಣದ ಹೊರಗೆ ಜನಔಷಧ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚೆ ನಡೆಯಬಹುದು. ಆದರೆ, ಆಸ್ಪತ್ರೆಯ ಒಳಗೆ ಅಲ್ಲ. ಇಂತಹ ನಿರ್ಧಾರಗಳೊಂದಿಗೆ ಆರೋಗ್ಯ ಇಲಾಖೆಯು ಜನರಿಗೆ ಹೆಚ್ಚು ಲಾಭವಾಗುವ ರೀತಿಯಲ್ಲಿ ಸೇವೆ ಒದಗಿಸಲು ಪ್ರಯತ್ನಿಸುತ್ತಿದೆ ಎಂದರು.
ಇನ್ನೂ ಮೈಸೂರು ಸ್ಯಾಂಡಲ್ ಬ್ರ್ಯಾಂಡ್‌ನ ಪ್ಯಾನ್ ಇಂಡಿಯಾ ಮಟ್ಟದ ವಿಸ್ತರಣೆಗಾಗಿ ನಟಿ ತಮನ್ನಾ ಭಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಹಲವರಲ್ಲಿ ವಿರೋಧದ ಸ್ವರಕ್ಕೆ ಕಾರಣವಾಗಿದೆ. ಸ್ಥಳೀಯ ಮಟ್ಟದಲ್ಲಿ ಕನ್ನಡ ನಟರು ಅಥವಾ ನಟಿಯರು ಪ್ರಚಾರದ ಮುಖವಾಗಬೇಕು ಎಂಬ ಮನೋಭಾವ ರಾಜ್ಯದ ಜನರಲ್ಲಿದೆ. ಆದರೆ, ಇಡೀ ದೇಶದಲ್ಲಿ ಮೈಸೂರು ಸ್ಯಾಂಡಲ್ ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ಪ್ಯಾನ್ ಇಂಡಿಯಾ ಜನಪ್ರಿಯತೆ ಹೊಂದಿರುವ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಪರಿಷತ್ತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ನಾನು ಕಲ್ಬುರ್ಗಿಯವನೇ ಆ ಬಗ್ಗೆ ಎಲ್ಲ ಮಾಹಿತಿ ಇದೆ. ಇವರು ನಮ್ಮ ನಾಯಕರನ್ನ ಬಾಯಿಗೆ ಬಂದಂತೆ ಬೈದರೆ ಅಲ್ಲಿರೋರು ಏನಾದರೂ ರಿಯಾಕ್ಟ್ ಮಾಡೋದೆ ತಾನೇ ಎಂದು ಹೇಳುವ ಮೂಲಕ ಹಲ್ಲೆಯನ್ನು ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.
ಇವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ ಆದರೆ ಕಾನೂನು ಸುವ್ಯವಸ್ಥೆ ಕಾಪಾಡಿದ್ದಾರೆ. ಪ್ರಿಯಾಂಕಾ ಅವರಿಗೆ ಮಾಧ್ಯಮದ ಮುಂದೆನೆ ಮಾತನಾಡಿದ್ದಾರೆ. ಅವರ ಆರೋಪದಂತೆ ಹಲ್ಲೆ ನಡೆದಿಲ್ಲ. ಆದ್ರೆ ಇವರಿಗೆ ಭಾಷೆ ಮೇಲೆ ಹಿಡಿತ ಇರಬೇಕು. ತಾವು ಮಾತಾಡೋದರ ಬಗ್ಗೆ ಪರಿಜ್ಞಾನ ಇಟಗೊಂಡು ಮಾತಾಡಬೇಕು. ಪ್ರಚೋದನೆ ಹೇಳಿಕೆ ಕೊಟ್ಟು ಈ ರೀತಿ ಅರಾಜಕತೆ ಸೃಷ್ಟಿ ಮಾಡೋದು ಬಿಜೆಪಿ ಪದ್ಧತಿ ಸಮಾಜದಲ್ಲಿ ಗೊಂದಲ ಮಾಡೋದು ಬಿಜೆಪಿ ಒಂದು ಸ್ಟ್ರ್ಯಾಟರ್ಜಿ ಎಂದರು.