ಗದಗ: ಸಿಇಟಿ, ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜನಿವಾರ ತೆಗೆಸದಂತೆ ಆಗ್ರಹಿಸಿ ಗದಗ್ ನಲ್ಲಿ 25 ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿದವು.
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ವಿಶ್ವಕರ್ಮ ಸೇರಿದಂತೆ ಜನಿವಾರ ಧಾರಣೆಯ ಸುಮಾರು 25 ಸಮಾಜಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಗದಗ್ ನ ವೇದಮಾತಾ ಗಾಯತ್ರಿ ಸಮಾಜ ಹಾಗೂ ಜನಿವಾರಧಾರಿಗಳ ಸರ್ವ ಸಮಾಜಗಳ ಒಕ್ಕೂಟದಿಂದ ಗದಗ್ ನ ವಿಠಲಾರೂಢ ಮಂಟಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮೂಲಕ ಮೆರವಣಿಗೆ ಮಾಡಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪರೀಕ್ಷಾ ನಿಯಮಗಳಲ್ಲಿ ಬದಲಾವಣೆ ಮಾಡಬೇಕು, ಈ ಹಿಂದೆ ಬೀದರ್ ಹಾಗೂ ಶಿವಮೊಗ್ಗ ದಲ್ಲಿ ನಡೆದ ಘಟನೆ ಖಂಡನೀಯ, ಶಿವಮೊಗ್ಗ, ಬೀದರ್ ಘಟನೆಗೆ ಸಂಬಂಧಿಸಿದ ಸಿಬ್ಬಂದಿ ಅಮಾನತು ಮಾಡಲಾಗಿದೆ. ಕೇವಲ ಅಮಾನತು ಮಾಡಿದ್ರೆ ಸಾಲದು, ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮುಂದೆ ನಡೆಯಬಾರದು. ಇದು ಹೀಗೆ ಮುಂದುವರೆದರೆ ಸರ್ವ ಜನಿವಾರ ಧಾರೆಣೆಗಳ ಸಮಾಜ ಒಕ್ಕೂಟದಿಂದ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.