ಮೈಸೂರು : ರಾಜ್ಯ ರಾಜಕಾರಣದಲ್ಲಿ ಹೆಚ್‌ಡಿಕೆ ಮತ್ತು ಸತೀಶ್ ಜಾರಕಿಹೊಳಿ ಭೇಟಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗಲು ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ ಎಂದು ಶಾಸಕ ಜಿ.ಟಿ ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್‍ನ 18 ಶಾಸಕರ ಬೆಂಬಲವನ್ನು ಅವರು ಕೇಳಿರಬಹುದು. ರಾಜಕಾರಣದಲ್ಲಿ ಏನುಬೇಕಾದರೂ ಆಗಬಹುದು ಎಂದಿದ್ದಾರೆ. ಜಾರಕಿಹೊಳಿಯವರು ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಎಂದರೆ ಅದಕ್ಕೆ ಇದೇ ಕಾರಣ. ಒಂದು ವೇಳೆ ಜೆಡಿಎಸ್ ಅವರಿಗೆ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ ಎಂದಿದ್ದಾರೆ.
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಎಸ್ ಟಿ ಸೋಮಶೇಖರ್
ಹನಿಟ್ರ್ಯಾಪ್ ವಿಚಾರವಾಗಿ ಮಾತನಾಡಿ ಸದನದಲ್ಲಿ ಸುನಿಲ್ ಕುಮಾರ್ ಹಾಗೂ ರಾಜಣ್ಣ ಈ ವಿಚಾರ ಮಾತನಾಡಿದ್ದಾರೆ. ಇತ್ತೀಚಿನ ದಿನಗಳ ಘಟನೆ ನೋಡಿದ್ರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ ಎನಿಸುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಬಿಜೆಪಿಯ ಆಂತರಿಕ ವಿಷಯ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಮುಂದೆ ಇನ್ನೂ ಏನೇನು ಬೆಳವಣಿಗೆ ಆಗುತ್ತೆ ಕಾದು ನೋಡೋಣ ಎಂದಿದ್ದಾರೆ.
ಸದನದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆ ಆಗಬೇಕಿತ್ತು. ಕೇವಲ ಗಲಾಟೆ ಗದ್ದಲದಲ್ಲೇ ಸದನ ಮುಗಿಯಿತು. ಸಿದ್ದರಾಮಯ್ಯ ಏನು ಬಜೆಟ್ ಮಂಡನೆ ಮಾಡಿದರು ಎಂಬುದು ಜನತೆಗೆ ಗೊತ್ತಾಗಲೇ ಇಲ್ಲ. ಅಭಿವೃದ್ಧಿ ವಿಚಾರ ಚರ್ಚೆ ಆಗಿದ್ರೆ ಜನ ಖುಷಿಯಾಗುತ್ತಿದ್ದರು ಎಂದಿದ್ದಾರೆ.