ಮಂಡ್ಯ :- ಮದ್ದೂರು ಪಟ್ಟಣದ ಶಿವಪುರದ ಕೊಪ್ಪ – ಮದ್ದೂರು ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ವಾಣಿಜ್ಯ ಮಳಿಗೆಗಳು, ಕಟ್ಟಡಗಳನ್ನು ಪುರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ಬೆಳಿಗ್ಗೆ ಒತ್ತುವರಿ ತೆರವುಗೊಳಿಸಲಾಯಿತು.
ಬೆಳ್ಳಂಬೆಳಿಗ್ಗೆ 7 ಗಂಟೆಗೆ ಮದ್ದೂರು ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ಅವರ ಬಿಗಿ ಪೊಲೀಸ್ ಭದ್ರತೆಯೊಂದಿಗೆ ತೆರಳಿದ ಲೋಕೋಪಯೋಗಿ ಎಇಇ ದೇವಾನಂದ್, ಮುಖ್ಯಾಧಿಕಾರಿ ಮೀನಾಕ್ಷಿ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಸುಮಾರು 70ಕ್ಕೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವು ಕಾರ್ಯಾಚರಣೆ ನಡೆಯಿತು.
ಮೂರು ದಿನಗಳ ಮುಂಚೆಯೇ ಮಳಿಗೆಗಳು, ಕಟ್ಟಡಗಳನ್ನು ಖಾಲಿ ಮಾಡುವಂತೆ ಪುರಸಭೆ, ಲೋಕೋಪಯೋಗಿ ಇಲಾಖೆಗಳು ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್ ಬಳಿಕ ಕೆಲವರು ಖಾಲಿ ಮಾಡಿದ್ದರು, ಕೆಲವರು ತೆರವು ಕಾರ್ಯಾಚರಣೆ ನಡೆಯುವುದಿಲ್ಲ ಎಂಬ ಭರವಸೆಯಲ್ಲಿ ಮನೆಯಲ್ಲಿ ಉಳಿದುಕೊಂಡಿದ್ದರು. ಮುಂಜಾನೆಯೇ ಜೆಸಿಬಿ ಕಾರ್ಯಾಚರಣೆಯ ಸದ್ದು ಕೇಳಿಸುತ್ತಿದ್ದಂತೆ ಮಳಿಗೆ ಕಟ್ಟಡಗಳಲ್ಲಿದ್ದು ಸಾಮಾನುಗಳನ್ನು ಹೊರತಂದು, ಕಣ್ಣೆದುರೇ ನೆಲಸಮ ಆಗುತ್ತಿರುವುದನ್ನು ಕಂಡು ದುಃಖಿತರಾದರು.
ಮದ್ದೂರು – ಕೊಪ್ಪ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡು ಮಳಿಗೆಗಳು, ಇತರೆ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ನೋಟಿಸ್ ನೀಡಿದ್ದರೂ ಸಹ ತೆರವು ಮಾಡದ ಹಿನ್ನೆಲೆಯಲ್ಲಿ ಇಂದು ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಎಇಇ ದೇವಾನಂದ್ ಹೇಳಿದರು.
ಇನ್ನು ತೆರವು ಕಾರ್ಯಾಚರಣೆಯ ವಿಷಯ ತಿಳಿದು ಪಟ್ಟಣದ ವ್ಯಾಪಾರಸ್ಥರು ಬೆಚ್ಚಿ ಬಿದ್ದಿದ್ದಾರೆ. ಈಗಾಗಲೇ ಮದ್ದೂರು ಪಟ್ಟಣದ ರಸ್ತೆ ಅಗಲೀಕರಣ ಮಾಡಲು ಸದನದಲ್ಲಿ ಅನುಮೋದನೆಗೊಂಡಿದ್ದು, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗಬೇಕಿದೆ. ಹೀಗಾಗಿ ಇನ್ನು ಕೆಲ ದಿನಗಳಲ್ಲೇ ಪಟ್ಟಣದ ರಸ್ತೆ ಅಗಲೀಕರಣವಾಗುವುದರಿಂದ ಇಂದು ನಡೆದ ರಸ್ತೆ ತೆರವು ಕಾರ್ಯಾಚರಣೆಯೂ ಪೇಟೆ ಬೀದಿಯಲ್ಲಿ ಅಕ್ರಮವಾಗಿ ಮಳಿಗೆ, ಕಟ್ಟಡ ನಿರ್ಮಿಸಿಕೊಂಡಿರುವವರಿಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ವರದಿ : ಗಿರೀಶ್ ರಾಜ್ ಮಂಡ್ಯ