ಕನ್ನಡ ಚಿತ್ರರಂಗ ಭಾಷೆ, ಗಡಿ ದಾಟಿ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಸಾಧನೆ ಮಾಡಿದೆ. ಕೆಜಿಎಫ್, ಕಾಂತಾರ, ಚಾರ್ಲಿ 777 ಸಿನಿಮಾಗಳು ಇಂಡಿಯನ್ ಸಿನಿ ಇಂಡಸ್ಟ್ರೀ ಇತಿಹಾಸದಲ್ಲಿ ತಿಕ್ಕಿ ಅಳಿಸಿ ಹಾಕದಂತಹ ದಾಖಲೆ ಬರೆದಿವೆ. ಆದ್ರೆ ಇಂತಹ ಚಿತ್ರರಂಗವನ್ನು ಕಡೆಗಣಿಸಲಾಗುತ್ತಿದೆಯೇ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅದಕ್ಕೆ ಕಾರಣ..ನಿನ್ನೆಯಿಂದ ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್ ಶೃಂಗಸಭೆ.
ಭಾರತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಮನರಂಜನಾ ಕೇಂದ್ರವನ್ನಾಗಿ ಮಾಡುವ ಗುರಿಯೊಂದಿಗೆ ವೇವ್ಸ್-ವಿಶ್ವ ಆಡಿಯೋ ವಿಷುಯಲ್ ಎಂಟರ್ಟೈನ್ಮೆಂಟ್) ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಪ್ರತಿಷ್ಠಿತ ಕಾರ್ಯಕ್ರಮವನ್ನು ಮುಂಬೈನಲ್ಲಿ ಬಹಳ ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಈ ಸಭೆ ಕನ್ನಡ ಚಿತ್ರರಂಗ ಹೊರತುಪಡಿಸಿ ಬೇರೆ ಇಂಡಸ್ಟ್ರೀಯ ತಾರೆಯರು ಭಾಗಿಯಾಗಿದ್ದಾರೆ. ಈ ಶೃಂಗಸಭೆಗೆ ಕನ್ನಡಿಗರಿಗೆ ಆಹ್ವಾನ ನೀಡಿಲ್ವಾ ಎಂಬ ಚರ್ಚೆ ಶುರುವಾಗಿದ್ದು, ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೀರಕಪುತ್ರ ಶ್ರೀನಿವಾಸ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು. “ಕನೆಕ್ಟಿಂಗ್ ಕ್ರಿಯೇಟರ್ಸ್, ಕನೆಕ್ಟಿಂಗ್ ಕಂಟ್ರಿಸ್” ಎಂಬ ಟ್ಯಾಗ್‌ಲೈನ್‌ನೊಂದಿಗೆ ಭಾರತವನ್ನು ಮಾಧ್ಯಮ, ಮನರಂಜನೆ ಮತ್ತು ಡಿಜಿಟಲ್ ಆವಿಷ್ಕಾರಗಳಿಗಾಗಿ ಜಾಗತಿಕ ಕೇಂದ್ರವನ್ನಾಗಿಸಲು ವೇವ್ಸ್ 2025 ಎಂಬ ನಾಲ್ಕು ದಿನಗಳ ಶೃಂಗಸಭೆ ಭಾರತ ಸರ್ಕಾರದಿಂದ ನಡೆದಿದೆ. ಇದ್ಯಾವುದೋ ಪ್ರಶಸ್ತಿ ಪ್ರದಾನ ಸಮಾರಂಭವೋ, ಔತಣಕೂಟವೋ ಆಗಿರಲಿಲ್ಲ. ಭಾರತವನ್ನು ಮನರಂಜನೆಯ ಜಾಗತಿಕ ಕೇಂದ್ರವನ್ನಾಗಿಸುವ ಹಿನ್ನಲೆಯಲ್ಲಿ ರೂಪಗೊಂಡ ಅತ್ಯಂತ ಮಹತ್ವದ ಸಭೆಯಾಗಿತ್ತು. ಆ ಸಭೆಯಲ್ಲಿ ಹಿಂದಿ, ತೆಲುಗು, ತಮಿಳು, ಮಲೆಯಾಳಂನವರೆಲ್ಲರೂ ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರಂತೂ ಅವರ ಸಿನಿಮಾ ಇಂಡಸ್ಟ್ರಿ ಬಗ್ಗೆ ಅತ್ಯಂತ ಮೌಲ್ಯಯುತವಾದ ಮಾತುಗಳನ್ನು ಆಡಿದರು. ಆದರೆ ಕನ್ನಡದಿಂದ ಒಬ್ಬೇ ಒಬ್ಬರೂ ಅಲ್ಲಿ ಕಾಣಿಸಿಕೊಂಡಿಲ್ಲ. ರಾಕ್ ಲೈನ್ ವೆಂಕಟೇಶ್, ನಾಗಾಭರಣ ಅವರು ಇದ್ರಂತೆ ಅನ್ನೋದು ನಮಗಿಲ್ಲಿ ಮುಖ್ಯವಾಗಬಾರದು. ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಅಕ್ಷಯಕುಮಾರ್, ಮಿಥುನ್ ಚಕ್ರವರ್ತಿ, ಹೇಮಮಾಲಿನ ತರಹದವರು ಆ ಸಭೆಯಲ್ಲಿ ಭಾಗವಹಿಸುತ್ತಿರುವಾಗ ಕನ್ನಡದಿಂದ ಯಾರು ಹೋಗಬೇಕಿತ್ತು? ಅನ್ನೋದನ್ನು ನಿಮ್ಮ ಅಂದಾಜಿಗೇ ಬಿಡುವೆ. ಕನ್ನಡ ಚಿತ್ರರಂಗದಲ್ಲಿ ಈ ಮಟ್ಟದ ಶೂನ್ಯ ಸೃಷ್ಠಿಸಿಬಿಟ್ಟರಲ್ಲ ಈ ಹೊಸ ಪೀಳಿಗೆಯವರು! ನನಗಿಲ್ಲಿ ಇನ್ನೂ ಒಂದು ಅನುಮಾನ ಕಾಡುತ್ತಿದೆ. ಶಿವರಾಜ್ ಕುಮಾರ್, ರವಿಚಂದ್ರನ್, ಅನಂತ್ ನಾಗ್ ಸುದೀಪ್, ಯಶ್ ಹೀಗೆ ಯಾರಾದರೊಬ್ಬರು ಹೋಗಬಹುದಿತ್ತು. ಆದ್ರೆ ಇವರು ಯಾರೂ ಹೋಗಲಿಲ್ಲ! ಅದರರ್ಥ ಅವರೇ ಕರೆಯಲಿಲ್ಲವಾ ಅಥವಾ ಕರೆದರೂ ಇವರು ಹೋಗಲಿಲ್ಲವಾ? ಎರಡೂ ತಪ್ಪೇ! ಎರಡೂ ಸಹ ಖಂಡನೆಗೆ ಅರ್ಹವಾದ ವಿಷಯಗಳು. ರಾಜ್, ವಿಷ್ಣು, ಅಂಬಿಯವರು ಇದ್ದಿದ್ರೆ ಇಂತಹ ಸ್ಥಿತಿ ಇರ್ತಿತ್ತಾ? ಅತ್ಯಂತ ಘನತೆಯನ್ನು ಹೊಂದಿದ್ದ ಕನ್ನಡ ಚಿತ್ರರಂಗವೀಗ ಪರಭಾಷೆಯವರಿಗೆ ಪೋಷಕ ನಟರನ್ನು ಒದಗಿಸುವ ಚಿತ್ರರಂಗವಾಗಿಬಿಟ್ಟಿದೆ. ನಮ್ಮಲ್ಲಿನ ಸ್ಟಾರುಗಳು ಅಲ್ಲೀಗ ಪೋಷಕ ನಟರು. ಹ್ಮಾ… ಅದೇ ಮಹಾಸಾಧನೆ ಎಂಬಂತೆ ನಾವೂ ಪ್ರಚಾರ ಕೊಡ್ತಿದ್ದೀವಿ. ಪರಭಾಷಿಕರು ನಮ್ಮ ಮಾರುಕಟ್ಟೆಯನ್ನು ಕಬ್ಜಾ ಮಾಡಲು ಅನುಸರಿಸುತ್ತಿರುವ ತಂತ್ರ ಅನ್ನೋದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಯಾಕಿಷ್ಟು ತಡಮಾಡಿಬಿಟ್ಟೆವು ಅನ್ನೋದು ಅರ್ಥವಾಗುತ್ತಿಲ್ಲ! ನಿನ್ನೆ ತೆಲುಗಿನ ನಾನಿಯ ಹಿಟ್ 3 ಸಿನಿಮಾ, ಆಂಧ್ರ, ತೆಲಂಗಾಣ ಬಿಟ್ಟರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕಲೆಕ್ಸನ್ ಮಾಡಿರೋದು ಮತ್ತು ಸೂರ್ಯನ ರೆಟ್ರೋ ಸಿನಿಮಾ ತಮಿಳುನಾಡು ಬಿಟ್ಟರೆ ಕರ್ನಾಟಕದಲ್ಲಿಯೇ ಹೆಚ್ಚು ಸಂಪಾದಿಸಿರೋದು! ಅಂದ್ರೆ ನಮ್ಮ ಕರುನಾಡು ಅವರುಗಳಿಗೆ ಎಷ್ಟೊಳ್ಳೆ ಮಾರುಕಟ್ಟೆಯಾಗಿದೆ ಅನ್ನೋದನ್ನು ನೀವೇ ಅರ್ಥಮಾಡಿಕೊಳ್ಳಿ. ಕನ್ನಡ ಚಿತ್ರರಂಗದ ಬೆನ್ನುಮೂಳೆ ಇಷ್ಟು ವೀಕ್ ಆಗಬಾರದಿತ್ತು.
-ವೀರಕಪುತ್ರ ಶ್ರೀನಿವಾಸ್