ಉಳಗನಾಯಗನ್ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಕೆಂಡಮಂಡಲರಾಗಿದ್ದಾರೆ. ಕಮಲ್ ಅದೊಂದು ಮಾತಿಗೆ ಕನ್ನಡಮಾತೆಯ ಮಕ್ಕಳು ಕುಪಿತಗೊಂಡಿದ್ದಾರೆ. ಕಮಲ್ ಹಾಸನ್ ಹಾಗೂ ಮಣಿರತ್ನಂ ಜೋಡಿ 30 ವರ್ಷದ ಬಳಿಕ ʼಥಗ್ ಲೈಫ್ʼಗಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರ ಬಿಡುಗಡೆ ಸಜ್ಜಾಗಿದ್ದು, ಈ ಸಿನಿಮಾದ ಪ್ರಚಾರದಲ್ಲಿ ಕಮಲ್ ಹಾಸನ್ ಬ್ಯೂಸಿಯಾಗಿದ್ದಾರೆ. ಮೊನ್ನೆ ಚೆನ್ನೈನಲ್ಲಿ ಅದ್ಧೂರಿಯಾಗಿ ಥಗ್ಸ್ ಲೈಫ್ ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವಣ್ಣ ಭಾಗಿಯಾಗಿದ್ದರು. ಕಮಲ್ ಹಾಸನ್ ಅವರ ದೊಡ್ಡ ಅಭಿಮಾನಿ ಎಂದ ಶಿವಣ್ಣ, ಅವರಿಗಾಗಿ ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು.
ಬರೋಬ್ಬರಿ 30 ನಿಮಿಷಗಳ ಕಾಲ ಮಾತನಾಡಿದ ಕಮಲ್ ಹಾಸನ್, ಅಣ್ಣಾವ್ರ ಜೊತೆಗಿನ ಒಡೆನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಅಲ್ಲದೇ ಕನ್ನಡ ಭಾಷೆ ಬಗ್ಗೆ ಅವರು ಹೇಳಿರುವ ಮಾತು ಆಕ್ರೋಶಕ್ಕೆ ಕಾರಣವಾಗಿದೆ.
ನನ್ನ ‘ರಾಜ ಪಾರ್ವೈ’ ಚಿತ್ರಕ್ಕೆ ಕ್ಲಾಪ್ ಮಾಡಿ ರಾಜ್‌ಕುಮಾರ್ ಅವ್ರು ಶುಭ ಕೋರಿದ್ದರು. ಬಳಿಕ ಬೆಂಗಳೂರಿನಲ್ಲಿ ‘ಪುಷ್ಪಕ ವಿಮಾನ’ ಸಿನಿಮಾ ಆರಂಭಿಸಿದಾಗ ಅದಕ್ಕೂ ಅವ್ರೇ ಕ್ಲಾಪ್ ಮಾಡಿದ್ದರು. ಇದು ಆ ಊರಿನಲ್ಲಿರುವ ನನ್ನ ಕುಟುಂಬ, ಅದಕ್ಕಾಗಿ ಶಿವಣ್ಣ ಇಲ್ಲಿ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ(ಕನ್ನಡ). ಹೀಗಾಗಿ ನೀವು ಅದರಲ್ಲಿ ಒಂದು” ಎಂದು ಕಮಲ್ ಹೇಳಿದ್ದಾರೆ.
ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ಕಮಲ್ ಮಾತಿಗೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಕನ್ನಡ ತಮಿಳು ಮೂಲವಲ್ಲ. ತಮಿಳಿಗಿಂತಲೂ ಬಹಳ ಹಳೆಯ ಭಾಷೆ ಕನ್ನಡ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕಮಲ್ ಹೇಳಿಕೆ ಬಗ್ಗೆ ಪರೋ ವಿರೋಧ ಚರ್ಚೆ ನಡೆಯುತ್ತಿದೆ.