ಕನ್ನಡ ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕ ಮುರಳಿ ಮೋಹನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವರು ವಾರಕ್ಕೆ 3 ದಿನಗಳ ಕಾಲ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. 2020 ರಲ್ಲೇ ಕಿಡ್ನಿ ಟ್ರ್ಯಾನ್ಸ್‌ಪ್ಲಾಂಟ್‌ಗೆ ಮುರಳಿ ಮೋಹನ್ ಒಳಗಾಗಬೇಕಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದೀಗ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
2018ರಿಂದ ಮುರಳಿ ಮೋಹನ್ ಅವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದಾರೆ. ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳು ಖರ್ಚಾಗಲಿದ್ದು, ಹೀಗಾಗಿ ಸಹಾಯಕ್ಕಾಗಿ ಅವರು ಅಂಗಲಾಚಿದ್ದಾರೆ. ಈಗಾಗಲೇ ಅವರು ಹೃದಯ ಶಸ್ತ್ರ ಚಿಕಿತ್ಸೆ ಹಾಗೂ ಇತರೆ ಚಿಕಿತ್ಸೆಗಳಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ..
ಹಿರಿಯ ನಟ, ನಿರ್ದೇಶಕ ಕಾಶೀನಾಥ್ ಅವರ ಗರಡಿಯಲ್ಲಿ ಪಳಗಿದ ಮುರಳಿ ಮೋಹನ್. ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆತ್ಮೀಯರು. ಕನ್ನಡ ಚಿತ್ರರಂಗದಲ್ಲಿ 36 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವವರು ಮುರಳಿ ಮೋಹನ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ‘ಸಂತ’, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ನಾಗರಹಾವು’, ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆಯ ‘ಮಲ್ಲಿಕಾರ್ಜುನ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ನಿರ್ದೇಶಕರಾಗಿ, ನಟರಾಗಿ, ಸಂಭಾಷಣೆಕಾರರಾಗಿ ಗುರುತಿಸಿಕೊಂಡಿರುವ ಮುರಳಿ ಮೋಹನ್ ಇದೀಗ ಆರೋಗ್ಯ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಮುರಳಿ ಮೋಹನ್ ಅವರಿಗೆ ಸಹಾಯ ಮಾಡುವಂತೆ ಗೌರೀಶ್ ಅಕ್ಕಿ ಸ್ಟುಡಿಯೋ ವೀಕ್ಷಕರಲ್ಲಿ ನಮ್ಮ ವಿನಂತಿ ಮಾಡಿಕೊಂಡಿದೆ. “ಮುರಳಿ ಮೋಹನ್ ಅವರ ಚಿಕಿತ್ಸೆಗಾಗಿ ನಿಮ್ಮ ಕೈಲಾದಷ್ಟು ಧನ ಸಹಾಯವನ್ನು ಪ್ರತಿಯೊಬ್ಬರು ಮಾಡುವ ಮೂಲಕ ಅವರ ಸಂಕಷ್ಟ ಕಾಲದಲ್ಲಿ ಸಹಾಯಹಸ್ತ ಚಾಚಬೇಕು. ಗೌರೀಶ್ ಅಕ್ಕಿ ಸ್ಟುಡಿಯೋ ಕೂಡ ಈ ಹೊತ್ತಿನಲ್ಲಿ ಮುರಳಿ ಅವರಿಗೆ ಅಗತ್ಯವಿರುವ ಸಹಾಯ ಮಾಡಲಿದೆ’’ ಎಂದು ಗೌರೀಶ್ ಅಕ್ಕಿ ಸ್ಟುಡಿಯೋ ಪೇಜ್‌ನಲ್ಲಿ ಬರೆಯಲಾಗಿದೆ.