ಸಿದ್ದು ಪೂರ್ಣಚಂದ್ರರವರು ಕಥೆ ಬರೆದು ನಿರ್ದೇಶನ ಮಾಡಿರುವ ಈ ಪಾದ ಪುಣ್ಯ ಪಾದ ಚಿತ್ರವು ಒಬ್ಬ ಆನೆ ಕಾಲುರೋಗಿಯ ಕಥಾ ವಸ್ತುವನ್ನು ಒಳಗೊಂಡಿದೆ. ಮನುಷ್ಯನಿಗೆ ದೈಹಿಕವಾಗಿ ಯಾವುದೇ ಕಾಯಿಲೆಗಳು ಬಂದಾಗ ಮಾನಸಿಕ ಸ್ಥಿತಿಯ ಅರಿವು ಮತ್ತು ಆ ವ್ಯಕ್ತಿಯ ಸಂಬಂಧಗಳ ಮನಸ್ಥಿತಿ ಹೇಗಿರುತ್ತದೆ ಎಂಬ ಅತೀ ಸೂಕ್ಷ್ಮ ವಿಷಯಗಳನ್ನು ಈ ಚಿತ್ರ ಒಳಗೊಂಡಿದೆ.
ಈ ಚಿತ್ರವು ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲೊಂದಾದ “ದಾದಾ ಸಾಹೇಬ್ ಫಾಲ್ಕೆ” ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಜ್ಯೂರಿ ಅವಾರ್ಡ್ ಪಡೆದುಕೊಂಡಿದೆ.
ತಮ್ಮ ಪ್ರತೀ ಚಿತ್ರದಲ್ಲೂ ಒಂದೊಂದು ವಿಭಿನ್ನ ವಿಷಯಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ ಸಿದ್ದು ಪೂರ್ಣಚಂದ್ರ. ‘ದಾರಿ ಯಾವುದಯ್ಯ ವೈಕುಂಠಕ್ಕೆ’ ಮತ್ತು ‘ತಾರಿಣಿ’ ಚಿತ್ರಗಳ ನಂತರ ಅವರು, ಇದೀಗ ‘ಈ ಪಾದ ಪುಣ್ಯಪಾದ’ ಎಂಬ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಬಾರಿ ಅವರು ಈ ಚಿತ್ರದಲ್ಲಿ ಆನೆ ಕಾಲು ರೋಗಿಯ ಕಥೆ ಹೇಳುವುದಕ್ಕೆ ಹೊರಟಿದ್ದಾರೆ.
“ಪೂರ್ಣಚಂದ್ರ ಫಿಲಂಸ್” ನಿರ್ಮಾಣ ಸಂಸ್ಥೆಯ ಜೊತೆಗೆ ಸಹ ನಿರ್ಮಾಪಕರಾಗಿ “ಸನ್ನಿ” ಯವರು ಕೈ ಜೋಡಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ‘ಆಟೋ ನಾಗರಾಜ್’ ಅಭಿನಯಿಸಿದ್ದಾರೆ. ಉಳಿದಂತೆ ರಶ್ಮಿ ಮೈಸೂರ್, ಚೈತ್ರ, ಜೈ ಶೆಟ್ಟಿ, ಬಲರಾಜ್ ವಾಡಿ, ಪ್ರಮೀಳಾ ಸುಬ್ರಮಣ್ಯ, ಬೇಬಿ ರಿಧಿ ಇನ್ನು ಮುಂತಾದವರು ಅಭಿನಯಿಸಿದ್ದಾರೆ. ರಾಜು ಹೆಮ್ಮಿಗೆಪುರ ರವರ ಛಾಯಾಗ್ರಹಣ, ಅನಂತ್ ಆರ್ಯನ್ ರವರ ಸಂಗೀತ, ದೀಪು ಸಿ ಎಸ್ ರವರ ಸಂಕಲನ, ಕೃಷ್ಣಮೂರ್ತಿ ಯವರ ಸಿಂಕ್ ಸೌಂಡ್ ಒಳಗೊಂಡಿದೆ.