ಮಂಡ್ಯ:- ಕನ್ನಡಿಗರು ಭಯೋತ್ಪಾದಕರು ಎಂದು ಬಿಂಬಿಸಿದ್ದ ಸೋನು ನಿಗಮ್ ಗೆ ವಿರುದ್ಧ ಮಂಡ್ಯದಲ್ಲಿ ದೂರು ದಾಖಲಾಗಿದೆ.
ಗಾಯಕ ಸೋನು ನಿಗಮ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಸೇನೆ ಕಾರ್ಯಕರ್ತರು ಆಗ್ರಹಿಸಿದರು. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಹೆಚ್ಚುವರಿ ಪೊಲೀಸ್ ಅಧೀಕ್ಷಕ ತಿಮ್ಮಯ್ಯರಿಗೆ ದೂರು ಸಲ್ಲಿಸಿದ ನಂತರ ಗಾಯಕ ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ನೆಲದಲ್ಲಿ ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿ ಅವಮಾನಿಸಿದ್ದಾರೆ. ಕನ್ನಡಿಗರನ್ನು ಕೀಳಾಗಿ ಕಂಡಿರುವುದು ಮಾತ್ರವಲ್ಲ. ಕನ್ನಡಿಗರನ್ನು ದೇಶದ್ರೋಹಿಗಳೆಂದು ಬಿಂಬಿಸಿ, ಅವರನ್ನು ಖಳನಾಯಕರನ್ನಾಗಿ ಮಾಡಿರುವ ಹುನ್ನಾರ ನಡೆಯುತ್ತಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಬೇಕು ಎಂದು ಒತ್ತಾಯಿಸಿದರು.
ಇನ್ನೂ ಈಗಾಗಲೇ ಕರ್ನಾಟಕದಲ್ಲಿ ಸೋನು ನಿಗಮ್ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು, ಬೆಂಗಳೂರಿನಲ್ಲಿ ಈಗಾಗಲೇ FIR ಕೂಡ ದಾಖಲಾಗಿದೆ. ಅಷ್ಟೇ ಅಲ್ಲದೇ ಗಾಯಕನ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಫಿಲ್ಮ್ ಚೇಂಬರ್ ಕನ್ನಡ ಚಿತ್ರರಂಗದಿಂದ ಬ್ಯಾನ್ ಕೂಡ ಮಾಡಿದೆ.