ಕಾಂತಾರ ಸಿನಿಮಾದ ಮೂಗುತಿ ಸುಂದರಿ ಸಪ್ತಮಿ ಗೌಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಡಿವೈನ್ ಹಿಟ್ ಕಂಡಿದ್ದ ಕಾಂತಾರ ಸೀಕ್ವೆಲ್ ನಲ್ಲಿ ಲೀಲಾ ಎಂಬ ಹಳ್ಳಿ ಹುಡ್ಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಸಪ್ತಮಿ ಗೌಡ ಈಗ ಮತ್ತೊಮ್ಮೆ ಹಳ್ಳಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಅಭಿನಯ ಚತುರ ನೀನಾಸಂ ಸತೀಶ್ ನಾಯಕನಾಗಿರೋ ‘ದಿ ರೈಸ್ ಆಫ್ ಅಶೋಕ’ ಸಿನಿಮಾದಲ್ಲಿ ಅಂಬಿಕಾ ಅನ್ನೋ ಪಾತ್ರದಲ್ಲಿ ಸಪ್ತಮಿ ನಟಿಸ್ತಿದ್ದಾರೆ. ಈ ಮೊದಲು ಅಂಬಿಕಾ ಪಾತ್ರದಲ್ಲಿ ರಚನಾ ರೈ ನಟಿಸಿದ್ರು.. ಕಾರಣಾಂತರಗಳಿಂದ ಈಗ ಆ ಪಾತ್ರದಲ್ಲಿ ಸಪ್ತಮಿ ಗೌಡ ನಟಿಸ್ತಿದ್ದಾರೆ. ಈಗಾಗಲೇ ಒಂದಷ್ಟು ದೃಶ್ಯಗಳ ಚಿತ್ರೀಕರಣವೂ ಕಂಪ್ಲೀಟ್ ಆಗಿದೆ. ‘ದಿ ರೈಸ್ ಆಫ್ ಅಶೋಕ’ ಚಿತ್ರದಲ್ಲಿ ನೀನಾಸಂ ಸತೀಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ವಿನೋದ್ ದೊಂಡಾಲೆ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರು. ಈ ಮೊದ್ಲು ಚಿತ್ರಕ್ಕೆ ‘ಅಶೋಕ ಬ್ಲೇಡ್’ ಅನ್ನುವ ಟೈಟಲ್ ಇಡಲಾಗಿತ್ತು. ಆದರೆ, ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ಬಳಿಕ ಸಿನಿಮಾದ ಟೈಟಲ್ ಬದಲಾಯಿಸಲಾಯ್ತು. ‘ಅಶೋಕ ಬ್ಲೇಡ್’ ಬದಲು ‘ಡಿ ರೈಸ್ ಆಫ್ ಅಶೋಕ’ ಎಂದು ಇಟ್ಟು, ಸಿನಿಮಾದ ಶೂಟಿಂಗ್ ನಡೆಸಲಾಗುತ್ತಿದೆ.
ನೀನಾಸಂ ಸತೀಶ್ ಗೆ ಜೋಡಿಯಾಗಿ ನಟಿಸುತ್ತಿರುವ ಸಪ್ತಮಿ ಗೌಡ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಫಸ್ಟ್ ಲುಕ್ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಕಾಂತಾರ ಬ್ಯೂಟಿ, “ನಿನ್ನ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಪಾಲಿರಲಿ.. ಒಂದು ನಿಂದಾದರೆ ಮತ್ತೊಂದು ನಂದು -ಅಂಬಿಕಾ” ಎಂಬ ಸಾಲುಗಳು ಅವರ ಪಾತ್ರದ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ಕ್ಷೇತ್ರಪತಿ, ಅವತಾರ ಪುರುಷ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಸಂಕಲನಕಾರರಾಗಿ ಕೆಲಸ ಮಾಡಿರುವ ಮನು ಶೆಡ್ಗಾರ್ ‘ದಿ ರೈಸ್ ಆಫ್ ಅಶೋಕ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಬ್ಯಾನರ್ ನಡಿ ವರ್ಧನ್ ನರಹರಿ, ಜೈಷ್ಣವಿ, ನೀನಾಸಂ ಸತೀಶ್ ರೈಸ್ ಆಫ್ ಅಶೋಕ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಬಿ.ಸುರೇಶ್, ಅಚ್ಯುತ್ ಕುಮಾರ್, ಗೋಪಾಲ ಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೀಯಾ, ಯಶ್ ಶೆಟ್ಟಿ ತಾರಾಬಳಗದಲ್ಲಿದ್ದಾರೆ. ಲವಿತ್ ಕ್ಯಾಮೆರಾ ಹಿಡಿಯುತ್ತಿದ್ದು, ವರದರಾಜ್ ಕಾಮತ್ ಕಲಾ ನಿರ್ದೇಶನ, ಪೂರ್ಣಚಂದ್ರ ತೇಜಸ್ವಿ ಎಸ್.ವಿ ಸಂಗೀತ ನಿರ್ದೇಶಕ, ಡಾ.ರವಿವರ್ಮಾ ಮತ್ತು ವಿಕ್ರಮ್ ಮೋರ್ ಸಾಹಸ ನಿರ್ದೇಶಕ, ಸಂತೋಷ್ ಶೇಖರ್ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ನಿರ್ದೇಶನದ ಜೊತೆಗೆ ಮನು ಶೆಡ್ಗಾರ್ ಸಂಕಲನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.