ಕಿಚ್ಚ ಸುದೀಪ್ ಅಭಿಮಾನಿಗಳು ಕಾಯ್ತಿದ್ದ ಆ ಕ್ಷಣ ಬಂದೇ ಬಿಟ್ಟಿದ್ದೆ. ಇಂದು ಬಿಲ್ಲ ರಂಗ ಭಾಷಾ ಚಿತ್ರದ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ಇಂದಿನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯುತ್ತಿದೆ. ವಿಶೇಷವಾದ ಪೋಸ್ಟರ್ ಮೂಲಕ ಚಿತ್ರತಂಡ ಶೂಟಿಂಗ್ ಆರಂಭವಾಗಿದೆ ಎಂದು ಹೇಳಿದೆ.
ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿ, ʼ20 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಪ್ರಮುಖ ಆಕ್ಷನ್ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಅದ್ಭುತ ಸೆಟ್ ಕೆಲಸ ನಡೆಯುತ್ತಿತ್ತು. ಅದು ಈಗ ಪೂರ್ಣಗೊಂಡಿದ್ದು ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಬ್ರೇಕ್ ತೆಗೆದುಕೊಂಡು ಮುಂದಿನ ಹಂತದ ಶೂಟಿಂಗ್ ಗೆ ಸಜ್ಜಾಗುತ್ತೇವೆʼ ಎಂದು ತಿಳಿಸಿದ್ದಾರೆ.
ಈ ಹಿಂದೆ ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಹನುಮಾನ್ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಬಿಲ್ಲ ರಂಗ ಭಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಈ ಚಿತ್ರವನ್ನು ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್ ಭಂಡಾರಿ ಈ ಮೊದಲು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದಾದ ಬಳಿಕ ಈ ಜೋಡಿ ‘ಬಿಲ್ಲ ರಂಗ ಬಾಷಾ’ ಸಿನಿಮಾಗೆ ಕೈ ಜೋಡಿಸಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.