ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್ ಅಂತರದ ಜಯ ದಾಖಲಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮನೆಯಾಚೆ ಅಮೋಘ ಪ್ರದರ್ಶನ ಮುಂದುವರೆಸಿದೆ. ಪಂಜಾಬ್ ತಂಡವನ್ನು ಅವರದ್ದೇ ತವರಿನಲ್ಲಿ ಮಣಿಸುವ ಮೂಲಕ ಪ್ರಸಕ್ತ ಐಪಿಎಲ್‌ನಲ್ಲಿ ಐದನೇ ಗೆಲುವು ದಾಖಲಿಸಿ ಪ್ಲೇ ಆಫ್‌ಗೆ ಹತ್ತಿರವಾಗುವ ಕನಸು ಕಾಣುತ್ತಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಸಂಘಟಿತ ಆಟ ಎದ್ದು ಕಂಡಿತು.
ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು.
ಈ ಮೂಲಕ ತವರಿನ ಸೋಲಿನ ಸೇಡನ್ನು ಬೆಂಗಳೂರು ತೀರಿಸಿಕೊಂಡಿತು. ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ 18.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.
ಪಂಜಾಬ್ ಪರ, ಪ್ರಿಯಾಂಶ್ ಆರ್ಯ 22, ಪ್ರಭಸಿಮ್ರನ್ 33, ಜೋಶ್ ಇಂಗ್ಲಿಸ್ 29, ಶಶಾಂಕ್ ಸಿಂಗ್ ಔಟಾಗದೆ (31) ಮತ್ತು ಮಾರ್ಕೊ ಜಾನ್ಸೆನ್ ಔಟಾಗದೆ 25 ರನ್ ಕೊಡುಗೆಯಿಂದ 6 ವಿಕೆಟ್ ಗೆ 157 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್ ಸಿಬಿ 18.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 7 ವಿಕೆಟ್ ಗಳ ಜಯಭೇರಿ ಬಾರಿಸಿತು.