ಜನ ನಾಯಗನ್..ದಳಪತಿ ವಿಜಯ್ ಅಂತಿಮ ಸಿನಿಮಾ..ತೆರೆಯಲ್ಲಿ ಜನ ನಾಯಗನ್ ಆಗಲು ಹೊರಟಿರುವ ವಿಜಯ್ ರಿಯಲ್ ಜನ ನಾಯಗನ್ ಆಗಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಅರ್ಥಾತ್ ಸಿನಿಮಾರಂಗಕ್ಕೆ ವಿದಾಯ ಹೇಳಿ ರಾಜಕೀಯ ರಣಕಣದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಲು ಮಾಸ್ಟರ್ ಐ ರೆಡಿ ಎಂದಾಗಿದೆ. ಸ್ವತಃ ಪಕ್ಷ ಕಟ್ಟಿ ಲಕ್ಷಾಂತರ ಜನರನ್ನು ಗುಡ್ಡೆ ಹಾಕಿ ಎದುರಾಳಿ ಪಕ್ಷಗಳಿಗೆ ನಡುಕ ಹುಟ್ಟುಹಾಕಿರುವ ದಳಪತಿ ಜನ ನಾಯಗನ್ ಮೂಲಕ ಪೊಂಗಲ್ ನಲ್ಲಿ ಕೊನೆಯ ಸಿನಿಮಾ ಕ್ರಾಂತಿ ಮಾಡಲು ಹೊರಟಿದ್ದಾರೆ.
ವಿಜಯ್ ಕೊನೆಯ ಸಿನಿಮಾ ಜನ ನಾಯಗನ್ ಪೊಂಗಲ್ ಹಬ್ಬಕ್ಕೆ ಅಂದರೆ ಮುಂದಿನ ವರ್ಷದ 2026 ಜನವರಿ 15ರಂದು ಬೆಳ್ಳಿಭೂಮಿ ಅಖಾಡಕ್ಕೆ ಕೆವಿಎನ್ ಪ್ರೊಡಕ್ಷನ್ ಇಳಿಸುತ್ತಿದೆ. ದಳಪತಿ ಕೊನೆಯ ಚಿತ್ರ ಅಂದ್ಮೇಲೆ ಅವರಿಗೆ ಕೊನೆಯ ವಿದಾಯವನ್ನು ಸೊಗಸಾಗಿಯೇ ನೆನಪಿನಲ್ಲಿ ಉಳಿಯುವಂತೆ ಮಾಡಲು ಕೆವಿಎನ್ ಮಾಸ್ಟರ್ ಬ್ಲಾಸ್ಟರ್ ಐಡಿಯಾ ಮಾಡಿದೆ.
ದಕ್ಷಿಣ ಚಿತ್ರರಂಗದಲ್ಲಿ ಹೊಸ ದಾಪುಗಾಲು ಇಡುತ್ತಿರುವ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್. ಈ ಪ್ರೊಡಕ್ಷನ್ ಹುಟ್ಟುಹಾಕಿರುವ ವೆಂಕಟ್ ಕೆ ನಾರಾಯಣ್ ಪೊಂಗಲ್ ಗೆ ತೆರೆಗೆ ಬರ್ತಿರುವ ಜನ ನಾಯಗನ್ ಯಾವುದೇ ಕೊರತೆಯಾಗದಂತೆ ಬಹಳ ಅದ್ಧೂರಿಯಾಗಿ ಹೈ ಬಜೆಟ್ ನಲ್ಲಿ ಚಿತ್ರ ನಿರ್ಮಾಣ ಮಾಡಿದೆ. ಅದ್ರಲ್ಲೂ ವಿಜಯ್ ಕೊನೆಯ ವಿದಾಯದ ಚಿತ್ರವಾಗಿರುವುದರಿಂದ ಏನೂ ಕಡಿಮೆಯಾಗದಂತೆ ಜನ ನಾಯಗನ್ ನ್ನು ಅಚ್ಚುಕಟ್ಟಾಗಿ ಸಿನಿಮಾರೂಪಕ್ಕೆ ಇಳಿಸುತ್ತಿದೆ.
ಜನ ನಾಯಗನ್ ಗೆ ದಳಪತಿ ಬೆಂಬಲದಂತಿದ್ದರೆ ಕೆವಿಎನ್ ಬಲದಂತಿದೆ. ನಿರ್ದೇಶಕ ಹೆಚ್ ವಿನೋದ್ ವಿಷನ್ ಗೆ ಸಕಲವನ್ನು ನೀಡುತ್ತಿದೆ ಕೆವಿಎನ್. ಅನಿರುದ್ಧ್ ರವಿಚಂದರ್ ಸಂಗೀತದ ಮೋಡಿ ಚಿತ್ರದ ಫ್ಲಸ್ ಪಾಯಿಂಟ್. ದಳಪತಿ ವಿಜಯ್ ಜೊತೆ ಪೂಜಾ ಹೆಗ್ಡೆ, ಬಾಲಿವುಡ್ ನಟ ಬಾಬಿ ಡಿಯೋಲ್, ಗೌತಮ್ ವಾಸುದೇವ ಮೆನನ್, ಪ್ರಿಯಾಮಣಿ, ಪ್ರಕಾಶ್ ರಾಜ್, ವರಲಕ್ಷ್ಮಿ ಶರತ್ ಕುಮಾರ್ ತಾರಾಬಳಗದಲ್ಲಿದ್ದಾರೆ.
ತಮಿಳು ಚಿತ್ರರಂಗದ ಬಾಕ್ಸಾಫೀಸ್ ಕಿಂಗ್ ಎನಿಸಿಕೊಂಡಿರುವ ಮಾಸ್ಟರ್ ಮೇನಿಯಾ ಪೊಂಗಲ್ ನಲ್ಲಿ ಜೋರಾಗಿರಲಿದೆ ಎಂಬ ಸೂಚನೆಯಂತೂ ಸಿಕ್ಕಿದೆ. ಅದಕ್ಕೆ ಸಂಪೂರ್ಣವಾದ ಸಹಕಾರವೂ ಕೆವಿಎನ್ ನೀಡಿದೆ. ಈ ಮೂಲಕ ದಳಪತಿ ಅಭಿಮಾನಿಗಳು ಪೊಂಗಲ್ ಹಬ್ಬವನ್ನು ವಿಶೇಷವಾಗಿ ಆಚರಿಸುವ ಖುಷಿಯಲ್ಲಿದ್ದಾರೆ.