ಕೋಲಾರ : ಜಾನುವಾರಗಳಿಗೆ ಕಾಲುಬಾಯಿ ಲಸಿಕೆ ಹಾಗೂ ಚರ್ಮಗಂಟು ರೋಗದ ಎರಡು ಲಸಿಕೆಗಳನ್ನು ವಿಜ್ಞಾನಿಗಳ ಸಮ್ಮತಿಯಿಂದ, ಕೇಂದ್ರ ಸರ್ಕಾರ ಪಶು ಇಲಾಖೆಯಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗಕ್ಕೆ ಪ್ರತಿಯೊಬ್ಬ ರೈತರು ಜಾನುವಾರಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಪಶು ಇಲಾಖೆಯ ಉಪನಿರ್ದೇಶಕ ಜಿ. ಎನ್. ರಮೇಶ್ ಮನವಿ ಮಾಡಿದರು.
ತಾಲೂಕಿನ ತೊರದೇವಂಡಹಳ್ಳಿಯ ಗ್ರಾಮದಲ್ಲಿ 7ನೇ ಸುತ್ತಿನ ಜಾನುವಾರಗಳಿಗೆ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು 2 ಲಕ್ಷ 10 ಸಾವಿರ ಜಾನುವಾರು ಗಳು ಇದ್ದು,ಲಸಿಕಾ ಅಭಿಯಾನವನ್ನು ಏಪ್ರಿಲ್ 26 ರಿಂದ ಜೂನ್ 9 ವರೆಗೂ 45 ದಿನ ಗಳವರೆಗೂ ಜಾನುವಾರು ಲಸಿಕಾ ಕಾರ್ಯ ನಡೆಯುತ್ತದೆ ಎಂದರು. ರೈತರು ತಮ್ಮ ಜಾನುವಾರಗಳಿಗೆ ಕಡ್ಡಾಯವಾಗಿ ಕಾಲುಬಾಯಿ ಲಸಿಕೆ ಮತ್ತು ಚರ್ಮ ಗಂಟು ರೋಗದ ಲಸಿಕೆಯನ್ನು ಹಾಕಿಸಬೇಕು, ಒಂದು ವೇಳೆ ನಾನಾ ಕಾರಣಗಳಿಂದ ಜಾನುವಾರು ಲಸಿಕೆಯಿಂದ ತಪ್ಪಿ ಹೋಗಿದ್ದರೆ, ಅಂತಹ ಜಾನುವಾರುಗಳನ್ನು ಗುರುತಿಸಿ ಮುಂದಿನಗಳಲ್ಲಿ ಲಸಿಕೆಯನ್ನು ಹಾಕಿಸಿಕೊಳ್ಳುವಂತೆ ರೈತರಲ್ಲಿ ಮನವಿ ಮಾಡಿದರು.