ಗೋಕಾಕ – ಗೋಕಾವಿ ನಾಡಿನ ಶಕ್ತಿ ದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಮಧ್ಯ ಸಡಗರ ಸಂಭ್ರಮದಿಂದ ಜರುಗಿತು. ಏಪ್ರಿಲ್ ೩೦ ರಿಂದ ಆರಂಭಗೊಂಡಿರುವ ಅಷ್ಠ ಬಂಧ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಮಹಾ ರಥೋತ್ಸವ ಕಾರ್ಯಕ್ರಮಕ್ಕೆ ಅಪಾರ ಭಕ್ತರು ಆಗಮಿಸಿ ದೇವಿಯರ ದರ್ಶನ ಪಡೆದರು.ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುಂದಾಳತ್ವದಲ್ಲಿ ಕಳೆದ ೮ ದಿನಗಳಿಂದ ಅತಿ ವಿಜೃಂಭಣೆಯಿಂದ ದೇವರುಗಳ ಮೂರ್ತಿ ಪ್ರತಿಷ್ಠಾಪನೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿ ಗೋಕಾಕ ಇತಿಹಾಸದಲ್ಲಿಯೇ ಹೊಸ ಮೈಲುಗಲ್ಲು ಸಾಧಿಸಿದ್ದು, ನೆರೆದ ಅಪಾರ ಭಕ್ತರಿಗೆ ಧಾರ್ಮಿಕ ವಾತಾವರಣ ಮೂಡಿಸುವಲ್ಲಿ ಈ ಕಾರ್ಯಕ್ರಮಗಳು ಯಶಸ್ವಿಯಾಗಿವೆ.
ಸುಮಾರು ೧೩ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಗಣಪತಿ, ಈಶ್ವರ, ಆಂಜನೇಯ, ನಾಗದೇವ, ನವಗ್ರಹ ದೇವರುಗಳ ಹೊಸ ದೇವಸ್ಥಾನಗಳು ತಲೆ ಎತ್ತಿದ್ದು, ಸಕಲ ಭಕ್ತರಿಗೆ ಒಂದೇ ದೇವಸ್ಥಾನದ ಆವರಣದಲ್ಲಿ ಬಹುತೇಕ ದೇವರುಗಳ ದರ್ಶನ ಭಾಗ್ಯ ಲಭಿಸಿದ್ದು, ಇಡೀ ಭಕ್ತ ಸಮುದಾಯವು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮಾಜ ಮುಖಿ ಕೆಲಸಕ್ಕೆ ಫಿದಾ ಆಗಿದೆ.
ಬುಧವಾರದಂದು ಮುಂಜಾನೆಯಿಂದ ವಿವಿಧ ಕಾರ್ಯಕ್ರಮಗಳು ಜರುಗಿದ್ದು, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ದಂಪತಿಗಳು ಪೂಜಾ ಕಾರ್ಯಗಳಲ್ಲಿ ಭಾಗಿಯಾಗಿ ದೇವರುಗಳ ಸೇವೆ ಸಲ್ಲಿಸಿದರು. ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮತ್ತವರ ಸಹೋದರ ತಂಡವೆಲ್ಲ ಲಖನ ಜಾರಕಿಹೊಳಿ ಅವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ತೇಲಿ ಹೋದರು.
ರಾತ್ರಿ ವೇಳೆ ನಡೆದ ಮಹಾಲಕ್ಷ್ಮೀ ದೇವರ ರಥೋತ್ಸವ ಕಾರ್ಯಕ್ರಮಕ್ಕೆ ಗೋಕಾಕ – ಮೂಡಲಗಿ ತಾಲೂಕು ಸೇರಿದಂತೆ ಜಿಲ್ಲೆಯ ಭಕ್ತರು ಸಾಥ್ ನೀಡಿ ರಥೋತ್ಸವವನ್ನು ಯಶಸ್ವಿಗೊಳಿಸಿದರು.ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.
ಉಡುಪಿ ಶೈಲಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ರಥೋತ್ಸವ ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ದೇವಸ್ಥಾನದ ಒಳಗಡೆ ನಡೆದ ರಥೋತ್ಸವವು ವಿವಿಧ ವಾದ್ಯ ಮೇಳಗಳು, ಕುಣಿತ ಭಕ್ತರನ್ನು ಮಂತ್ರ ಮುಗ್ಧರಣ್ಣಗಿಸಿತು.
ಮೂರು ಬಾರಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿಸಿ ಭವ್ಯವಾಗಿ ರಥೋತ್ಸವ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ಉಡುಪಿಯ ಹೆಸರಾಂತ ಪಂಡಿತ ಉಚ್ಚಿಲ ಆಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಗೋಕಾಕದಲ್ಲಿ ನಡೆಯುತ್ತಿರುವ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಸಕಲ ಭಕ್ತ ಸಮೂಹಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಅನ್ನಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ತಂಡವೊಂದನ್ನು ರಚಿಸಲಾಗಿತ್ತು. ರಥೋತ್ಸವ ಕಾರ್ಯಕ್ರಮದಲ್ಲಿ ಸುಮಾರು ೨೦ ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿ ಮಹಾಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾದರು.