ಬೆಳಗಾವಿ : ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದ ಬಳಿಕ ಇದೀಗ ವಾಟರ್ ಪಾಲಿಟಿಕ್ಸ್ ಜೋರಾಗಿದೆ. ಕೋಯ್ನಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಆದರೆ ಕರ್ನಾಟಕ ಸಿಎಂ ಪತ್ರ ಬರೆದೂ 15 ದಿನಗಳಾದರೂ ಸಹ ಈ ಬಗ್ಗೆ ಮಹಾರಾಷ್ಟ್ರ ಸ್ಪಂದಿಸಿಲ್ಲ.
ಕಳೆದ ಏಪ್ರಿಲ್ 1 ರಂದೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು, ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರು ಬಿಡುಗಡೆಗೆ ಮನವಿ ಮಾಡಿದ್ದಾರೆ. ಆದರೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಸರ್ಕಾರದಿಂದ ನೀರು ಬಿಡಲು ವಿಳಂಬ ಧೋರಣೆ ತೋರುತ್ತಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ವಿದೆ. ಹೀಗಾಗಿ ನೀರು ಬಿಡುಗಡೆ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ರಾಜಕೀಯ ನಡೆಸಲಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದೇ ಅನ್ನೋ ಕಾರಣಕ್ಕೆ ವಿಳಂಬ ಮಾಡಲಾಗುತ್ತಿದೆ.
ಈ ಸರ್ಕಾರ ಯಾವಾಗ ತೊಲಗುತ್ತೊ ಎಂಬ ಆಶಾಭಾವನೆಯಲ್ಲಿ ಜನರಿದ್ದಾರೆ: ಆರ್. ಅಶೋಕ್
ಇನ್ನೂ ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ತುಟಿಬಿಚ್ಚುತ್ತಿಲ್ಲ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಹಾಯ್ದು ಹೋಗಿರೋ ಕೃಷ್ಣಾ ನದಿ ಈಗಾಗಲೇ ಖಾಲಿಯಾಗುತ್ತಿದೆ. ಬೇಸಿಗೆ ಇರೋದ್ರಿಂದ ಕೃಷ್ಣಾ ನದಿ ತೀರದಲ್ಲಿ ನೀರಿನ ಹಾಹಾಕಾರವುಂಟಾಗಿದ್ದು, ಪ್ರತಿ ವರ್ಷವೂ ಮಹಾರಾಷ್ಟ್ರದಿಂದ ನೀರು ಬಿಡಲು ಮಿನಾಮೇಷ ಎಣಿಸುತ್ತಾರೆ ಎಂದು ಮಹಾರಾಷ್ಟ್ರ ಸರ್ಕಾರದ ವಿಳಂಬ ನೀತಿಗೆ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.