‘ಪಾರು’, ‘ವಧು’ ಮುಂತಾದ ಧಾರಾವಾಹಿ ಹಾಗೂ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದಲ್ಲಿ ನಟಿಸಿದ್ದ ಶ್ರೀಧರ್ ಹಾಸಿಗೆ ಹಿಡಿದಿದ್ದಾರೆ. ಗುರುತೇ ಸಿಗದಂತೆ ಬದಲಾಗಿರುವ ಶ್ರೀಧರ್ ಅವರು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದಾರೆ. ಕಮಲಿ ಖ್ಯಾತಿಯ ಅಂಕಿತಾ, ಸ್ವಪ್ನಾ ದೀಕ್ಷಿತ್ ಸೇರಿ ಹಲವಾರು ಕಿರುತೆರೆಯ ಕಲಾವಿದರು ಅವರ ಕಷ್ಟಕ್ಕೆ ಮಿಡಿದಿದ್ದಾರೆ. ಚೆನ್ನಾಗಿದ್ದ ಶ್ರೀಧರ್ ಅವರಿಗೆ ಧೀಡೀರ್ ಏನಾಯ್ತು ಅನ್ನೋದು ಗೊತ್ತಿಲ್ಲ. ತಮ್ಮ ಅನಾರೋಗ್ಯದ ಕುರಿತು ಶ್ರೀಧರ್ ಮಾತನಾಡಿರುವ ಆಡಿಯೋವೊಂದು ವೈರಲ್ ಆಗುತ್ತಿದೆ.
ಶ್ರೀಧರ್ ಮಾತನಾಡಿರುವ ಆಡಿಯೋದಲ್ಲಿ “ನಾನು ಒಬ್ಬನೇ ಇರೋದು. ಅಕ್ಟೋಬರ್ನಲ್ಲೇ ಆರೋಗ್ಯ ಸಮಸ್ಯೆ ಶುರುವಾಯ್ತು. ನನಗೆ ವಿಟಮಿನ್, ಪ್ರೋಟಿನ್ ಎಲ್ಲಾ ಕಮ್ಮಿ ಆಗಿದೆ. ಮೊದಲು ಜ್ವರ ಬಂತು, ಆಮೇಲೆ ಕಫ ಆಗಿದೆ ಅಂತ ಡಾಕ್ಟರ್ಗೆ ತೋರಿಸಿದೆ, ಎಲ್ಲೂ ಸರಿ ಆಗಲಿಲ್ಲ. ಆಗ ಕಾಲೆಲ್ಲಾ ಊದಿಕೊಳ್ಳುತ್ತಿತ್ತು. ಅದರಲ್ಲೇ ನಾನು ವಧು, ಸಿಂಧೂ ಭೈರವಿ ಶೂಟಿಂಗ್ಗೆ ಹೋಗ್ತಿದ್ದೆ. ನಂತರ ನನಗೆ ತುಂಬಾ ಸುಸ್ತು ಆಗೋಕೆ ಶುರುವಾಯ್ತು. ನಾನೊಬ್ಬನೇ ಇರೋದ್ರಿಂದ ಯಾರೂ ಕೇರ್ ಮಾಡೋರು ಇರಲಿಲ್ಲ. ಯಾರಾದರೂ ಇದ್ದಿದ್ರೆ ನನಗೆ ಈ ಸ್ಥಿತಿ ಬರ್ತಾ ಇರಲಿಲ್ಲ” ಎಂದಿದ್ದಾರೆ.
“ನನ್ನ ಸ್ನೇಹಿತರೊಬ್ಬರು ಆರ್ಯುವೇದಿಕ್ ಡಾಕ್ಟರ್ ಬಳಿ ಕರೆದುಕೊಂಡು ಹೋದರು. ಅವರು ನನಗೆ 20 ದಿವಸ ಪಥ್ಯ ಮಾಡೋಕೆ ಹೇಳಿದರು. ಆನಂತರ ಇಡೀ ದೇಹ ಊದಿಕೊಂಡಿತು. ಈಗ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಅಮ್ಮ ನನ್ನ ಜೊತೆ ಇದ್ದಾರೆ. ಟ್ರೀಟ್ಮೆಂಟ್ ನಡೆಯುತ್ತಿದೆ. ಸಂಪೂರ್ಣವಾಗಿ ದೇಹಕ್ಕೆ ಇನ್ಪೇಕ್ಷನ್ ಆಗಿದೆ, ಹಲ್ಸರ್ ಆಗಿದೆ. ನಡೆಯೋದಕ್ಕೂ ಆಗೋದಿಲ್ಲ, ತುಂಬಾ ಕಷ್ಟ ಅನ್ನಿಸ್ತಾ ಇದೆ. 10 ದಿನಗಳಿಂದ ಆಸ್ಪತ್ರೆಯಲ್ಲಿದ್ದೇನೆ” ಎಂದು ಹೇಳಿದ್ದಾರೆ.
“ವಿಕ್ಟೋರಿಯಾದಲ್ಲಿ ನಾನು 15 ದಿವಸ ಇದ್ದೆ. ಯಾವುದೇ ಟ್ರೀಟ್ಮೆಂಟ್ ಕೊಡಲಿಲ್ಲ. ಆನಂತರ ಈಗ ಬ್ಯಾಪಿಸ್ಟ್ ಆಸ್ಪತ್ರೆಗೆ ಸೇರಿಸಿದರು. ನನಗೆ ಯಾವ ಕೆಟ್ಟ ಅಭ್ಯಾಸವೂ ಇಲ್ಲ. ನನಗೆ ಈ ಥರ ಯಾಕೆ ಹೀಗೆ ಆಗಿದೆ? ನನಗೆ ಸದ್ಯ ಕೆಲಸವೂ ಇಲ್ಲ ಅಂತ ಬೇಜಾರು ಆಗ್ತಿದೆ. ಸ್ನೇಹಿತರು ಸಹಾಯ ಮಾಡಿದ್ದಾರೆ. ನಾನು ಬದುಕಬೇಕು, ಮೊದಲಿನ ಥರ ಆಗಬೇಕು. ಹಲವು ತಿಂಗಳಿಂದ ನಾನು ಮನೆಯ ಬಾಡಿಗೆಯನ್ನು ಕೂಡ ಕಟ್ಟಿಲ್ಲ. ನಾನು ನಟನೆ ಜೊತೆಗೆ ಇಡ್ಲಿ, ವಡೆ, ದೋಸೆ ಮಾರಾಟ ಮಾಡುತ್ತಿದ್ದೆ. ನನಗೆ ಯಾರೂ ಇಲ್ಲ ಅಂದುಕೊಂಡಿದ್ದೆ. ಆದರೆ ಈಗ ಎಲ್ಲಿಂದಲೋ ಸಹಾಯ ಮಾಡುತ್ತಿದ್ದಾರೆ. ಮಾತ್ರೆಗೆ, ಸಣ್ಣಪುಟ್ಟ ಖರ್ಚಿಗೆ ಸಹಾಯ ಆಗುತ್ತಿದೆ. ಮುಂದೆ ಡಿಸ್ಚಾರ್ಜ್ ಮಾಡುವಾಗ ಎಷ್ಟು ಹಣ ಆಗುತ್ತೋ ಗೊತ್ತಿಲ್ಲ. ನಾನು ಗಟ್ಟಿಯಾಗಿ ಎನರ್ಜಿ ತಗೊಂಡು ಹೊರಗೆ ಬಂದಮೇಲೂ ನಾನು 1-2 ವರ್ಷ ವಿಶ್ರಾಂತಿ ಪಡೆಯಬೇಕು. ಏನೂ ಕೆಲಸ ಮಾಡುವಂತಿಲ್ಲ. ನಾನು ಎಷ್ಟು ಚೆನ್ನಾಗಿದ್ದೆ ಗೊತ್ತಾ? ನನಗೆ ಬೇಜಾರಾಗ್ತಿದೆ” ಎಂದು ಶ್ರೀಧರ್ ಕಣ್ಣೀರಿಟ್ಟಿದ್ದಾರೆ.