ಹುಬ್ಬಳ್ಳಿ:- ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಕ್ಕೆ ಶೀಘ್ರವೇ ಮೋದಿ ಉತ್ತರ ಕೊಡ್ತಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚಿನ ದಿನದಲ್ಲಿ ಶಾಂತಿ ನೆಲೆಸಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಅವರು ಕೈಗೊಂಡ ಕ್ರಮಗಳಿಂದ ಶಾಂತಿ ನೆಲೆಸಿತ್ತು. ಹೀಗಾಗಿ ಹೆಚ್ಚಿನ ಪ್ರವಾಸಿಗರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಆರಂಭ ಮಾಡಿದ್ದರು ಎಂದಿದ್ದಾರೆ.
ದೇಶದ ಜನತೆ ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕು ಅನ್ನೋ ಇಚ್ಛೆ ಹೊಂದಿದ್ದಾರೆ. ಮೃತ ಕುಟುಂಬದ ಜೊತೆಗೆ ದೇಶ, ಭಾರತ ಸರ್ಕಾರವಿದೆ. ಉಗ್ರಗಾಮಿಗಳ ಹತ್ಯೆಯಾಗುತ್ತದೆ. ಭಾರತ ದೇಶ ಜಗತ್ತಿನಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಅದನ್ನು ಸಹಿಸಲು ಪಾಕಿಸ್ತಾನಕ್ಕೆ ಆಗುತ್ತಿಲ್ಲ. ಪಾಕಿಸ್ತಾನ ಅವನತಿ ಆರಂಭವಾಗಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ಮಾಡಿದ್ದಾರೆ. ಮೋದಿ ಅವರು ಬಲಾಢ್ಯ ರಾಷ್ಟ್ರ ಕಟ್ಟುತ್ತಿದ್ದಾರೆ. ಮೋದಿ ಅವರು ಆದಷ್ಟು ಬೇಗ ಇದಕ್ಕೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.
ಭದ್ರತಾ ವ್ಯವಸ್ಥೆ ಸರಿಯಿದೆ ಎಂದು ಪ್ರವಾಸಿಗರೇ ಹೇಳಿದ್ದಾರೆ. ಆದರೂ ಈ ಘಟನೆ ನಡೆದಿದೆ. ಯಾವ ಸರ್ಕಾರ ಬಂದಾಗ ಕೂಡಾ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಇರಲಿಲ್ಲ. ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಅಲ್ಲಿ ಶಾಂತಿ ನೆಲೆಸಿತ್ತು. ಉಗ್ರಗಾಮಿಗಳನ್ನು ನಾಶ ಮಾಡಬೇಕು. ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಯನ್ನು ನಾಶ ಮಾಡಬೇಕು ಎಂದು ಕಿಡಿಕಾರಿದ್ದಾರೆ.