ಉತ್ತರ ಕನ್ನಡ : ರಕ್ಷಣಾ ಕ್ಷೇತ್ರದಲ್ಲಿ ಭಾರತ ಹಲವು ಮಹತ್ತರ ಕಾರ್ಯಗಳನ್ನು ಸಾಧಿಸುತ್ತಾ ಬಂದಿದೆ. ಇದೀಗ ಹಿಂದೂ ಮಹಾಸಾಗರಕ್ಕೆ ಅಂಟಿಕೊಂಡಿರುವ 9 ದೇಶಗಳ ಜೊತೆ ಮೈತ್ರಿ ಮಾಡಿಕೊಂಡು, ನೌಕಾಪಡೆಯಲ್ಲಿ ವಿನೂತನ ಕಾರ್ಯಾಚರಣೆಗೆ ಮುಂದಾಗಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯನ್ನು ಏಷ್ಯಾದಲ್ಲೇ ಅತಿದೊಡ್ಡ ನೌಕಾನೆಲೆ ಮಾಡುವ ಗುರಿಯನ್ನ ಹೊಂದಿರುವ ಭಾರತ ಸರ್ಕಾರ, ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡತ್ತಲಿದೆ. ಇದರ ನಡುವೆಯೇ ಇನ್ನೊಂದು ಐತಿಹಾಸಿಕ ಕಾರ್ಯಕ್ಕೆ ಕಾರವಾರದ ನೌಕಾನೆಲೆ ಸಾಕ್ಷಿ ಆಗಿದೆ.
ಹೌದು, ಕಾರವಾರದ ಕದಂಬ ನೌಕಾ ನೆಲೆಯಲ್ಲಿ ಐ.ಓ.ಎಸ್ ಸಾಗರ ಹೆಸರಿನ ಕಾರ್ಯಾಚರಣೆಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಚಾಲನೆ ನೀಡಿದ್ದಾರೆ. ಕೀನ್ಯಾ, ಮಡ್ಗಾಸ್ಕರ್, ಮಾಲ್ಡೀವ್ಸ್, ಮಾರಿಶಸ್, ಮೊಝಾಂಬಿಕ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಕೊಮೊರೋಸ್, ಸೇಂಚ್ಹೆಲ್ಸ್ ಹೀಗೆ 9 ದೇಶಗಳ ಜೊತೆ ಮೈತ್ರಿ ಮಾಡಿಕೊಂಡಿರುವ ಭಾರತ, ತಮ್ಮ ದೇಶದ ರಕ್ಷಣೆಯ ಜೊತೆಗೆ ಬೇರೆ ದೇಶದ ರಕ್ಷಣೆಗೂ ಮುಂದಾಗಿದೆ.
ಐಎನ್ಎಸ್ ಸುನೈನಾ ಎಂಬ ಹಡಗು ಹಿಂದೂ ಮಹಾಸಾಗರದಲ್ಲಿ ಕಾರ್ಯಾಚರಣೆ ಮಾಡಲಿರುವ ವಿಶೇಷ ಅಂಡರ್ ಪೆಟ್ರೋಲಿಂಗ್ ಯುದ್ದ ನೌಕೆ ಆಗಿದೆ. ಈ ನೌಕೆಯಲ್ಲಿ ಒಟ್ಟು 120 ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸಿತ್ತಿದ್ದು, ಆ ಪೈಕಿ 9 ದೇಶಗಳ 44 ಸಿಬ್ಬಂದಿಗಳು ಮತ್ತು ಭಾರತ ದೇಶದ 76 ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಒನ್ ಓಶನ್ ಒನ್ ಮಿಷನ್ ಎಂಬ ಉಪಕ್ರಮದಡಿ ಭಾರತ ಈ ಹೆಜ್ಜೆ ಇಟ್ಟಿದ್ದು, ಹಿಂದು ಮಹಾಸಾಗರ ವ್ಯಾಪ್ತಿಯ ಭಾರತ ಮಿತ್ರ ರಾಷ್ಟ್ರಗಳ ನಡುವೆ ಸಮುದ್ರ ವ್ಯವಹಾರದ ಬಾಂಧವ್ಯ ವೃದ್ಧಿ, ಪರಸ್ಪರ ಸಹಕಾರ ವೃದ್ಧಿ ಮಾಡಿಕೊಳ್ಳುವ ಜತೆಗೆ ಹಿಂದು ಮಹಾಸಾಗರದ ರಕ್ಷಣೆ ಅದರ ಸುತ್ತಲಿನ ಬಳಕೆದಾರ ರಾಷ್ಟ್ರಗಳಿಗೆ ಸೇರಿದ್ದು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಭಾರತ ಹೊರಟಿದೆ ಎಂದಿದ್ದಾರೆ.