ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕ ವ್ಯಾಪ್ತಿಯ 65 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ 28 ದಿನಗಳ ಆರೋಗ್ಯ ಫಿಟೈಸ್ ತರಬೇತಿ ನೀಡಲಾಗಿದ್ದು, ಸುಮಾರು ಜನರು 4 ರಿಂದ 11 ಕೆಜಿಯಷ್ಟು ತೂಕ ಇಳಿಸಿಕೊಂಡು ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದು ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು.
ಇಲ್ಲಿನ ಗೋಕುಲ ರಸ್ತೆಯ ಹೊಸ ಸಿಎಆರ್ ಮೈದಾನದಲ್ಲಿ ನಡೆಯುತ್ತಿರುವ ತರಬೇತಿ ಶಿಬಿರಕ್ಕೆ ಭೇಟಿ ಪರಿವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಹಂತದ ಶಿಬಿರದಲ್ಲಿ ಘಟಕ ವ್ಯಾಪ್ತಿಯ 65 ಸಿಬ್ಬಂದಿ ಗುರುತಿಸಲಾಗಿತ್ತು. ಅವರೆಲ್ಲರೂ ನಿರಂತರವಾಗಿ 28 ದಿನಗಳ ತರಬೇತಿಯಲ್ಲಿ 400ಕ್ಕೂ ಹೆಚ್ಚು ಕೆಜಿ ತೂಕದ ಬೊಜ್ಜು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಹಣ್ಣಿಗೆ ಹೃದಯಾಘಾತ ತಡೆಯೋ ಶಕ್ತಿ ಇದೆ.. ವಾರದಲ್ಲಿ ಒಮ್ಮೆಯಾದರೂ ತಪ್ಪದೇ ಸೇವಿಸಿ!
ಪೊಲೀಸ್ ಇಲಾಖೆಯಲ್ಲಿ ದೈಹಿಕ ಸದೃಢತೆ ಬಹಳ ಮಹತ್ವವಾಗಿದೆ. ಆ ನಿಟ್ಟಿನಲ್ಲಿ ನೇಮಕಾತಿ ಸಂದರ್ಭದಲ್ಲಿಯೇ ಅವರ ಎತ್ತರ, ತೂಕ, ಎದೆ ಸುತ್ತಳತೆ, ಓಟ, ಗುಂಡು ಎಸೆತ, ಎತ್ತರ ಜಿಗಿತ ಪರೀಕ್ಷೆಯ ನಂತರ, ಜ್ಞಾನದ ಪರೀಕ್ಷೆ ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆದರೆ ನೇಮಕಾತಿಯ ನಂತರ ಕರ್ತವ್ಯಕ್ಕೆ ಸೇರಿದ ಮೇಲೆ ಕೆಲವರು ಫಿಟೈಸ್ ಮಾಡಲ್ಲ. ಇದರಿಂದ ಬೊಜ್ಜು ಬಂದು ಸಾಮಾಜಿಕ ಜಾಲತಾಣದಲ್ಲಿ ಹಾಸ್ಯಾಸ್ಪದ ರೀತಿಯಲ್ಲಿ ಆಗುತ್ತವೆ. ಆದರೆ ಸಿನಿಮಾದಲ್ಲಿ ತೋರಿಸುವಂತೆ ನಮ್ಮ ಇಲಾಖೆಯಲ್ಲಿ ಪೊಲೀಸರು ಅತಿಯಾದ ಬೊಜ್ಜು ಹೊಂದಿರುವುದಿಲ್ಲ. ಶೇ. 90ರಷ್ಟು ಜನ ದೈಹಿಕವಾಗಿ ಸದೃಢವಾಗಿದ್ದಾರೆ. ಆದರೆ ಕೆಲವರು ಆರೋಗ್ಯದ ಸಮಸ್ಯೆಯಿಂದ ದೈಹಿಕ ಸದೃಢತೆ ಹಾಳು ಮಾಡಿಕೊಂಡಿದ್ದರು ಎಂದರು.
ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಳೆದ ನಾಲ್ಕು ವಾರಗಳಿಂದ ಪೊಲೀಸ್ ಆಯುಕ್ತಾಲಯ ಘಟಕ ವ್ಯಾಪ್ತಿಯಲ್ಲಿ ತರಬೇತಿ ಶಿಬಿರ ನಡೆಸಲಾಗುತ್ತಿದೆ. ಇದರಲ್ಲಿ 90 ಕೆಜಿಗಿಂತ ಹೆಚ್ಚಿರುವ ಪುರುಷ ಮತ್ತು 70 ಕೆಜಿಗಿಂತ ಹೆಚ್ಚಿರುವ ಮಹಿಳಾ ಸಿಬ್ಬಂದಿ ಗುರುತಿಸಲಾಗಿತ್ತು. ಕೆಲವರು ಮೊದಲು ಅಸಡ್ಡೆ ತೋರಿದ್ದರು. ಆದರೆ ನಂತರ ಬಹಳಷ್ಟು ಸಂತೋಷದಿಂದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಇನ್ನೊಂದು ವಾರ ತರಬೇತಿ ಮುಂದುವರೆಸಲಾಗುವುದು ಎಂದರು.
ತರಬೇತಿಯಲ್ಲಿ ಭಾಗವಹಿಸಿದವರು 40ವರ್ಷ ಮೇಲ್ಪಟ್ಟವರಾಗಿದ್ದಾರೆ. ತರಬೇತಿಯ ಖರ್ಚನ್ನು ಸಿಬ್ಬಂದಿಗಳೇ ಮಾಡಿಕೊಂಡಿದ್ದಾರೆ. 28 ದಿನಗಳ ಶಿಬಿರದಲ್ಲಿ ಎಎಸ್ಐ ಮೋಹನ ಕುಲಕರ್ಣಿ 11 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಹೆಡ್ ಕಾನ್ಸಟೇಬಲ್ ರವಿ ಹೊಸಮನಿ ಮತ್ತು ಬಸವರಾಜ ಬೆಳಗಾವಿ 9 ಕೆಜಿ ಹಾಗೂ ಮಹಿಳಾ ಎಎಸ್ಐ ದಿಲಶಾದ್ ಮುಲ್ಲಾ 7 ಕೆಜಿ ಇಳಿಸಿಕೊಂಡಿದ್ದಾರೆ. ಒಟ್ಟಾರೆ ಬಹುತೇಕ ಸಿಬ್ಬಂದಿ 4 ರಿಂದ 11 ಕೆಜಿವರೆಗೆ ತೂಕ ಇಳಿಸಿಕೊಂಡಿದ್ದಾರೆ ಎಂದರು.
ಒಂದು ತಿಂಗಳ ಕಾರ್ಯಾಗಾರದಲ್ಲಿ ಹೊಸ ಸಿಎಆರ್ ಮೈದಾನದಲ್ಲಿ ವಾಸ್ತವ್ಯ ನೀಡಿ ಬೆಳ್ಳಗ್ಗೆಯಿಂದ ರಾತ್ರಿಯವರೆಗೆ ವಾಕಿಂಗ್, ರನ್ನಿಂಗ್, ಯೋಗ, ಡ್ರಿಲ್, ಮೆಡಿಟೇಷನ್, ಕ್ರೀಡೆ, ಆರೋಗ್ಯಕರ ಊಟ ಸೇರಿ ವಿವಿಧ ಚಟುವಟಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ಬೊಜ್ಜು ಇರುವವರನ್ನು ಗುರುತಿಸಿ ಇದೇ ರೀತಿ ತರಬೇತಿ ಮಾಡಲಾಗುವುದು. ಜೊತೆಗೆ ಅಧಿಕಾರಿಗಳ ಮತ್ತು ಸಿಬ್ಬಂದಿ ಕುಟುಂಬ ಸದಸ್ಯರಿಗೂ ಕೂಡ ಈ ರೀತಿಯ ತರಬೇತಿ ಅವಶ್ಯಕತೆ ಇದೆ ಎಂದು ಗುರುತಿಸಲಾಗಿದೆ. ಆ ಕುರಿತು ಯೋಜಿಸಿ, ಅವರಿಗೂ ತರಬೇತಿ ನೀಡಲಾಗುವುದು ಎಂದರು.