ಧಾರವಾಡ; ಬಿಸಿಲಿನ ಧಗೆಗೆ ಬಸವಳಿದ ತಾಲ್ಲೂಕಿನ ಜನತೆಗೆ ಮಂಗಳವಾರ ಮಧ್ಯಾಹ್ನ ಮತ್ತು ಸಂಜೆ ಸುರಿದ ಉತ್ತಮ ಮಳೆಗೆ ತಂಪಿನ ಅನುಭವ ಸವಿಯುವುದರ ಜೊತೆಗೆ ವರ್ಷದ ಪ್ರಥಮ ಮಳೆಯ ಆನಂದ ಸವಿದರು. ಈ ಮಳೆಯ ವಿಶೇಷವಾಗಿ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಮಂಗಳವಾರ ಸಂಜೆ ವಾರದ ಸಂತೆಗೆ ಮಳೆಯಿಂದ ಅಡಚಣೆಯಾಯಿತು.ಮಳೆಯಿಂದ ರಕ್ಷಣೆ ಮಾಡಲು ಮಂಗಳವಾರ ಸಂತೆಯ ವ್ಯಾಪಾರಸ್ಥರು ತಾಡಪತ್ರಿಯ ಮೋರೆ ಹೋಗಿದ್ದರು. ಅಳ್ನಾವರ, ಕಾಶೇನಟ್ಟಿ, ಹೂಲಿಕೇರಿ, ಬೆಣಚಿ, ಕೋಗಿಲಗೇರಿ, ಕಡಬಗಟ್ಟಿ, ಡೋರಿ ಮುಂತಾದೆಡೆ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಹಲವೆಡೆ ಜೋರಾದ ಗಾಳಿ ಬೀಸಿದ್ದರಿಂದ ಮಳೆ ಗಾಳಿಯ ಜೊತೆ ಹಾರಿ ಹೋಯಿತು ಎಂದು ರೈತ ಮಲ್ಲನಗೌಡ ಪಾಟೀಲ ತಿಳಿಸಿದರು. ಇನ್ನೂ ಹಲವೆಡೆ ಗುಡುಗು ಸಿಡಿಲಿನ ಆರ್ಭಟ ಕೇಳಿ ಬಂತು.
ಈ ಬಣ್ಣದ ಬೆಕ್ಕು ನಿಮ್ಮ ಮನೆಗೆ ಬಂದರೆ ಅದೃಷ್ಟ ಕೈಹಿಡಿಯುವ ಮುನ್ಸೂಚನೆಯಂತೆ..!
‘ಈ ಮಳೆ ಕಬ್ಬು ಬೆಳೆಗೆ ಸಂಜೀವಿನಿ ಇದ್ದಂತೆ. ಬೇಸಿಗೆಯಲ್ಲಿ ದೊರೆಯುವ ಅಲ್ಪ ವಿದ್ಯುತ್ ಮೂಲಕ ಕಬ್ಬಿಗೆ ನೀರು ಹಾಯಿಸುವುದು ಸದ್ಯ ನಿಂತಿದೆ. ಈ ಮಳೆ ಕಬ್ಬು ಬೆಳೆಗೆ ತುಂಬಾ ಸಹಕಾರಿಯಾಗಿದೆ. ಮಳೆ ಬಾರದಿದ್ದಲ್ಲಿ ಕಬ್ಬು ಬಿಸಿಲಿನ ಬೇಗೆಗೆ ಒಣಗಿ ಅದರ ಗಣಕಿ ಟಿಸಳು ಒಡೆಯುವ ಭೀತಿ ಇತ್ತು’ ಎಂದು ಕುಂಬಾರಕೊಪ್ಪ ಗ್ರಾಮದ ರೈತ ಅಶೋಕ ಜೋಡಟ್ಟಿ ಹೇಳಿದರು. ಅಳ್ನಾವರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಮಳೆಯಲ್ಲಿ ಜನರು ಸಾಗಿದರು.