ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಹಾಳ ಹಾಗೂ ಅಂಚಟಗೇರಿ ಗ್ರಾಮಗಳಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿ, ಒಟ್ಟು 9 ಲಕ್ಷ ಮೌಲ್ಯದ ಬಂಗಾರದ ಆಭರಣಗಳು ಮತ್ತು ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
19 ಜೂನ್ 2025 ರಂದು ತಾರಿಹಾಳ ಗ್ರಾಮದ ಸೈದುಸಾಬ್ ದಾವಲಸಾಬ ನದಾಫ್ ಅವರ ಮನೆಯ ಮುಂದಿನ ಬಾಗಿಲು ತೆರೆದು ಒಳ ನುಗ್ಗಿದ್ದ ಕಳ್ಳರು, ಹಾಲ್‌ನಲ್ಲಿ ಇದ್ದ ಕಪಾಟಿನ ಬಾಗಿಲು ಮುರಿದು, ಅದರೊಳಗಿನ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಇನ್ನೊಂದೆಡೆ 30 ಜೂನ್ 2025 ರಂದು ಅಂಚಟಗೇರಿ ಗ್ರಾಮದ ಆಶ್ರಯ ಪ್ಲಾಟ್ ನಲ್ಲಿ ಮನೆಯ ಬಾಗಿಲಿನ ಕೀಲಿ ಮುರಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಈ ಇಬ್ಬರು ಆರೋಪಿಗಳನ್ನು ಗುರುತಿಸಿ ಬಂಧಿಸುವ ಕಾರ್ಯವನ್ನು ಧಾರವಾಡ ಜಿಲ್ಲಾ ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಎಸ್‌ಪಿ ನಾರಾಯಣ ಭರಮನಿ ಹಾಗೂ ಡಿಎಸ್‌ಪಿ ವಿನೋದ ಮುಕ್ತದಾರ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಇನ್ಸ್‌ಪೆಕ್ಟರ್ ಬಿ.ಎ. ಕಾಮನಬೈಲ್, ಇನ್ಸ್‌ಪೆಕ್ಟರ್ ಮುರುಗೇಶ್ ಚನ್ನನವರ, ಪಿಎಸ್‌ಐ ಸಚಿನ್ ಆಲಮೇಲಕರ್, ಎಎಸ್‌ಐ ಎನ್.ಎಮ್. ಹೊನ್ನಪ್ಪನವರ, ಸಿಬ್ಬಂದಿ ಜನರಾದ ಎ. ಎ. ಕಾಕರ್, ಹೆಚ್ ಬಿ ಐಹೋಳೆ, ಹೆಚ್ ಎಲ್ ಮಲ್ಲಿಗವಾಡ, ಸಂತೋಷ ಚವ್ಹಾಣ, ಚನ್ನಪ್ಪ ಬಳ್ಳೋಳ್ಳಿ, ಮಹಾಂತೇಶ ಮದ್ದಿನ್, ಗಿರೀಶ ತಿಪ್ಪಣ್ಣವರ, ವಿಶ್ವನಾಥ ಬಡಿಗೇರ, ವಿಶ್ವ ಶಿವಬಸಣ್ಣವರ, ಶಂಭುಲಿಂಗ ಹಿರೇಮಠ, ಪ್ರೇಮ ರಾಠೋಡ, ನಾಗರಾಜ ಮಾಣೀಕ್ ಹಾಗೂ ತಾಂತ್ರಿಕ ಸಿಬ್ಬಂದಿ ಆರೀಪ್ ಗೊಲಂದಾಜ, ವಿಠಲ್ ಡೊಂಗನವರ, ಚೇತನ ಮಾಳಗಿ ಮತ್ತು ಇತರ ಸಿಬ್ಬಂದಿ ಸದಸ್ಯರ ನಿರಂತರ ಪರಿಶ್ರಮದಿಂದ ದಿನಾಂಕ 28 ಜೂನ್ ಮತ್ತು 4 ಜುಲೈ 2025 ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಸಾಧಿಸಿದ್ದಾರೆ.