ಮೈಸೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಬೀದಿಗಿಳಿದಿದ್ದು, ಜನಾಕ್ರೋಶ ಯಾತ್ರೆ ಹೆಸರಿನಲ್ಲಿ ಬೃಹತ್ ಹೋರಾಟ ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆ ಹೋರಾಟಕ್ಕೆ ಚಾಲನೆ ನೀಡಲಾಯಿತು.
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಜನಾಕ್ರೋಶ ಯಾತ್ರೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಿದ್ದಾರೆ. ಇಂದಿನಿಂದ ಮೇ 3 ವರೆಗೆ ರಾಜ್ಯಾದ್ಯಂತ ಜನಾಕ್ರೋಶ ಯಾತ್ರೆ ಸಾಗಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ದಲಿತರ ಹಣ ಲೂಟಿ ಖಂಡಿಸಿ ನಡೆಯುತ್ತಿರುವ ಜನಾಕ್ರೋಶ ಪ್ರತಿಭಟನಾ ಯಾತ್ರೆಯಲ್ಲಿ ಮೈಸೂರು, ಚಾಮರಾಜನಗರ ಜಿಲ್ಲಾ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಯಾತ್ರೆ ನಂತರ ಗಾಂಧಿ ವೃತ್ತದ ಬಳಿವ ಸಾರ್ವಜನಿಕ ಸಭೆ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕರಾದ ಆರ್ ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಶ್ರೀವತ್ಸ, ಮಾಜಿ ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ, ಅಶ್ವತ್ ನಾರಾಯಣ್, ಶಾಸಕ ಅರವಿಂದ್ ಬೆಲ್ಲದ್, ಮಾಜಿ ಸಿಎಂ ಸದಾನಂದ ಗೌಡ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಪ್ರೀತಂಗೌಡ, ಪಿ.ರಾಜೀವ್, ಮೈಸೂರು ಬಿಜೆಪಿ ನಗರಾಧ್ಯಕ್ಷ ಹಾಗು ಮಾಜಿ ಶಾಸಕ ಎಲ್ ನಾಗೇಂದ್ರ ಸೇರಿದಂತೆ ಹಲವು ಹಿರಿಯ ಮುಖಂಡರು ಭಾಗಿಯಾಗಿದ್ದರು.