ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಅಟ್ಟಹಾಸ ಅಟ್ಟಹಾಸಕ್ಕೆ ನೂರಾರು ಜೀವಗಳ ಉಸಿರು ಚೆಲ್ಲಿವೆ. ಈವರೆಗೆ 28 ಜನರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕರ್ನಾಟಕದ ಬೆಂಗಳೂರು ಮೂಲದ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಉಗ್ರರು ನಡೆಸಿರುವ ಈ ಕೃತ್ಯವನ್ನು ಎಲ್ಲರೂ ತೀವ್ರವಾಗಿ ಖಂಡಿಸುತ್ತಿದ್ದಾರೆ. ರಾಜಕಾರಣಿಗಳಿಂದ ಹಿಡಿದು ಸಿನಿಮಾತಾರೆಯರು ಆಕ್ರೋಶ ಹೊರಹಾಕುತ್ತಿದ್ದಾರೆ.
ನಟ ಶಿವರಾಜ್ ಕುಮಾರ್ ಉಗ್ರರ ದಾಳಿಯನ್ನು ಕಠುವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶಿವಣ್ಣ, “ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಉಗ್ರರ ದಾಳಿಯನ್ನ ತೀವ್ರವಾಗಿ ಖಂಡಿಸುತ್ತೇನೆ. ಶಾಂತಿ ಸೌಹಾರ್ದದ ಭಾರತದಲ್ಲಿ ಇಂತಹ ಕೃತ್ಯಗಳು ಮರುಕಳಿಸದಿರಲಿ. ಹಾಗೆಯೇ ಈ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆ ಆಗಲಿ ಮತ್ತು ನಮ್ಮನ್ನು ಅಗಲಿದ ಎಲ್ಲಾ ಭಾರತೀಯರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕೋರುತ್ತಾ ಎಲ್ಲಾ ಕುಟುಂಬಸ್ಥರಿಗೆ ಈ ದುಃಖವನ್ನು ಭರಿಸುವ ಶಕ್ತಿ ಹಾಗೂ ಧೈರ್ಯವನ್ನು ದೇವರು ನೀಡಲಿ. ಈ ಪೈಶಾಚಿಕ ಕೃತ್ಯ ಎಸಗುವವರ ವಿರುದ್ಧದ ಸರ್ಕಾರದ ಹೋರಾಟಕ್ಕೆ ಸದಾ ಬೆಂಬಲವಿರುತ್ತದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಾಲಿವುಡ್ ಹಲವು ತಾರೆಯರು ಉಗ್ರರ ಈ ಹೇಯ ಕೃತ್ಯದ ಬಗ್ಗೆ ಧ್ವನಿ ಎತ್ತಿದ್ದಾರೆ ‘ಓಂ ಶಾಂತಿ ನನ್ನ ಕಡೆಯಿಂದ ಸಂತಾಪ ಸೂಚಿಸುತ್ತೇನೆ. ಆಘಾತ ಮತ್ತು ಕೋಪ ಬರುತ್ತಿದೆ. ದುಃಖವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಾವೆಲ್ಲರೂ ಆಂತರಿಕ ಜಗಳವನ್ನು ಬಿಟ್ಟು, ಒಂದಾಗಿ ನಿಜವಾದ ಶತ್ರುವನ್ನು ಅರಿತುಕೊಳ್ಳುವ ಸಮಯ ಬಂದಿದೆʼ ಎಂದು ಪೋಸ್ಟ್ ಮಾಡಿದ್ದಾರೆ.
ನಟ ಅಕ್ಷಯ್ ಕುಮಾರ್, ಸೋನು ಸೂದ್, ವಿವೇಕ್ ಓಬೆರಾಯ್ ಸೇರಿದಂತೆ ಹಲವು ಸ್ಟಾರ್ಗಳು ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.