ರಾಷ್ಟ್ರ ಪ್ರಶಸ್ತಿ ವಿಜೇತ ನಟ ಶ್ರೀ ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ’ ಎಂಬ ಸಿನಿಮಾವನ್ನು ನಿರ್ಮಾಣ ಮಾಡಿ `ಪುತ್ತೂರು ಭರತ್’ ಎಂದೇ ಜನಪ್ರಿಯರಾಗಿದ್ದ ಶ್ರೀ ಭರತ್ ಕುಮಾರ್ ನಿನ್ನೆ ರಾತ್ರಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಪುತ್ತೂರಿನ, ಪಡ್ನೂರು ಗ್ರಾಮದ ಮತಾವು ಮನೆಯ ದಿ. ಹರೀಶ ಗೌಡ ಮತ್ತು ಜಯಂತಿ ದಂಪತಿಯ ಹಿರಿಯ ಪುತ್ರ ಭರತ್ 43 ವರ್ಷ ಪ್ರಾಯದವರಾಗಿದ್ದು, ಬೆಂಗಳೂರಿನಲ್ಲಿ ಸಿವಿಲ್ ಬಿಲ್ಡರ್ ಆಗಿ ಸ್ವಯಂವೃತ್ತಿ ನಿರತರಾಗಿದ್ದರು.
ಭರತ್ ಅವರು ಬೆಂಗಳೂರು ಮತ್ತು ಪುತ್ತೂರು ಕಂಬಳ ಕೂಟಗಳ ಸದಸ್ಯರೂ ಆಗಿದ್ದು ಜನಾನುರಾಗಿಯಾಗಿದ್ದರು. ಮೃತ ಭರತ್ ಅವರು ಅಮ್ಮ, ಪತ್ನಿ ರವಿಕಲಾ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಮಗ ನಿಹಾರ್ ಮತ್ತು ಮಗಳು ಹಂಸಿಕಾ, ತಮ್ಮ ಆದರ್ಶ, ತಂಗಿ ಸೌಮ್ಯಾ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಲಿದ್ದು, ಸಿನಿಮಾ ರಂಗದಲ್ಲಿ ಇನ್ನಷ್ಟು ಸಾಧಿಸುವ ಕನಸು ಹೊತ್ತಿದ್ದ ಭರತ್, ಎಳೆಯರದಲ್ಲೇ ದೂರವಾಗಿದ್ದು ತುಂಬಲಾರದ ನಷ್ಟ.