ಬೆಂಗಳೂರು: ಜಾತಿಗಣತಿ ವರದಿಯ ಅಂಕಿ ಅಂಶಗಳ ಬಗ್ಗೆ ಚರ್ಚಿಸಲು ರಾಜ್ಯ ಸರ್ಕಾರ ಕೂಡಲೇ ಸರ್ವಪಕ್ಷ ಸಭೆ ಸಭೆ ಕರೆಯಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆದಿದ್ದು ತಪ್ಪು, ಈ ಅತಿರೇಕ ಮುಂದುವರಿಯದಿರಲಿ: ನಿಖಿಲ್ ಕುಮಾರಸ್ವಾಮಿ!
ಅಲ್ಲದೆ, ಎಲ್ಲಾ ಸಮುದಾಯಗಳ ಸ್ವಾಮೀಜಿಗಳು, ಮುಖಂಡರು, ಬುದ್ದಿಜೀವಿಗಳನ್ನು ಆಹ್ವಾನಿಸಿ ಸಮಾಲೋಚನೆ ನಡೆಸಬೇಕು ಹಾಗೂ ಇದಕ್ಕೆ ಸರ್ವಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಸರ್ಕಾರವನ್ನು ಆಗ್ರಹಪಡಿಸಿದರು. ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು; ಗಣತಿಗೆ ಜೆಡಿಎಸ್ ಯಾವುದೇ ಕಾರಣಕ್ಕೂ ವಿರೋಧ ಮಾಡುತ್ತಿಲ್ಲ. ಆದರೆ, ಸಮೀಕ್ಷೆ ಕ್ರಮಬದ್ಧವಾಗಿ ಇಲ್ಲ. ಸೋರಿಕೆ ಆಗಿರುವ ಅಂಕಿ ಅಂಶಗಳ ಸತ್ಯಾಸತ್ಯತೆ ಬಗ್ಗೆ ಪ್ರಶ್ನೆ ಮಾಡಿದ್ದೇವೆ ಹಾಗೂ ಆ ಅಂಕಿ ಅಂಶಗಳು ಸತ್ಯಕ್ಕೆ ದೂರವಾಗಿವೆ ಎಂದಷ್ಟೇ ಹೇಳಿದ್ದೇವೆ ಎಂದು ಹೇಳಿದರು.
ಸಮೀಕ್ಷೆ ವಿಧಾನವೇ ಸರಿ ಇಲ್ಲ. ಯಾರ ಮನೆಗೆ ಹೋಗಿದ್ದಾರೆ, ಯಾವ ಮಾನದಂಡ ಇಟ್ಟುಕೊಂಡು ಸಮೀಕ್ಷೆ ಮಾಡಿದ್ದಾರೆ ಎಂಬ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಇಡೀ ವರದಿಯನ್ನು ಪುನಾ ಪರಿಶೀಲನೆ ಮಾಡಬೇಕು. ಹೀಗಾಗಿ ಕೂಡಲೇ ಸರ್ಕಾರ ಸರ್ವಪಕ್ಷಗಳ ಸಭೆ ಕರೆದು ವರದಿ ಬಗ್ಗೆ ಚರ್ಚೆ ಮಾಡಬೇಕು ಎಂದು ಅವರು ಒತ್ತಾಯ ಮಾಡಿದರು. ಸಿಎಂ ಅವರು ದೆಹಲಿಗೆ ಹೋಗಿ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದಕ್ಕೆ ರಾಹುಲ್ ಗಾಂಧಿ ಅನುಮತಿ ಪಡೆದುಕೊಂಡು ಬಂದಿದ್ದಾರೆ. ಗಣತಿ ಅಂಕಿ ಅಂಶಗಳು ಸೋರಿಕೆ ಆಗಿವೆ. ಸೋರಿಕೆ ಆಗಿದ್ದು ಹೇಗೆ? ಯಾರು ಮಾಡಿದ್ದು? ಇದರ ಉದ್ದೇಶ ಏನು? ಸರ್ಕಾರ ಮಾಡಿದ್ದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಾಡಿದ್ದು. ಬಿಡುಗಡೆ ಆಗಿದ್ದು ಜಾತಿ ಅಂಕಿ ಅಂಶ. ಯಾವ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದೆ ಉಳಿದಿದೆ ಎಂಬ ಮಾಹಿತಿಯೇ ಇಲ್ಲ. ಅದಕ್ಕೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಯಾಕೆ ಸೋರಿಕೆ ಮಾಡಲಿಲ್ಲ? ಸುಮ್ನೆ ನೋಡೋಣ.. ಬೆಂಕಿ ಬಿದ್ರೆ ಬೀಳಲಿ ಎನ್ನುವ ಮನಸ್ಥಿತಿ ಇವರದು ಎಂದು ವಾಗ್ದಾಳಿ ನಡೆಸಿದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಗ್ಗೆ ಚರ್ಚೆ ಆಗಬೇಕಿತ್ತು. ಶೋಷಿತರಿಗೆ ಆಗಿರುವ ಸಮಸ್ಯೆ ಬಗ್ಗೆ ಚರ್ಚೆ ಆಗಬೇಕಿತ್ತು. ಸೌಲಭ್ಯಗಳಿಂದ ವಂಚನೆ ಆಗಿದ್ದವರ ಬಗ್ಗೆ ಸರ್ಕಾರ ಕಾರ್ಯಕ್ರಮ ರೂಪಿಸುವ ಬಗ್ಗೆ ಸಮೀಕ್ಷೆ ಆಗಬೇಕಿತ್ತು. ಅದು ಆಗಿಲ್ಲ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವರದಿಗೆ ನಮ್ಮ ಸ್ವಾಗತ ಇದೆ. ಆದರೆ ಇವರು ಬಿಟ್ಟಿರುವ ವರದಿ ಹೇಗಿದೆ ಎಂಬುದನ್ನು ಎಲ್ಲರೂ ನೋಡುತ್ತಿದ್ದಾರೆ ಎಂದು ಹೇಳಿದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಈಗ ಜಾತಿಗಣತಿ ಆಗಿದೆ. ಅದು ಹೇಗೆ? ಮುಸ್ಲಿಂಮರಲ್ಲಿ ಶಿಯಾ, ಸುನ್ನಿ ಸೇರಿ 60 ಉಪ ಜಾತಿ ಬರುತ್ತವೆ. ಕ್ರಿಶ್ಚಿಯನ್ನರ ಲ್ಲಿ ಅನೇಕ ಉಪ ಜಾತಿ ಬರುತ್ತವೆ. ಅವರನ್ನು ಒಗ್ಗೂಡಿಸಿ ಕೆಲ ಜಾತಿಗಳನ್ನು ಮಾತ್ರ ಛಿದ್ರ ಮಾಡಿದ್ದಾರೆ. ಇದು ಯಾವ ರೀತಿಯ ಸಾಮಾಜಿಕ ನ್ಯಾಯ? ಎಂದು ಅವರು ಪ್ರಶ್ನಿಸಿದರು
ರಾಹುಲ್ ಗಾಂಧಿ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ:
ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದರು. ಅವರನ್ನು ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಸಮೀಕ್ಷೆ ಹೆಸರಿನಲ್ಲಿ ಜಾತಿ ಜಾತಿ ಒಡೆದು ಕರ್ನಾಟಕ ರಾಜ್ಯಕ್ಕೆ ಯಾವ ಸಂದೇಶ ಕೊಡ್ತಿದ್ದೀರಾ ಮಿಸ್ಟರ್ ರಾಹುಲ್ ಗಾಂಧಿ ಅವರೇ? ರಾಹುಲ್ ಗಾಂಧಿ ಅವರೇ ಸಮುದಾಯಗಳ ನಡುವೆ ವಿಷಬೀಜ ಬಿತ್ತಿದ್ದೀರಿ. ಜನ ಬೀದಿಬೀದಿಗಳಲ್ಲಿ ಹೊಡೆದಾಡಬೇಕಾ? ಇದೇನಾ ನಿಮ್ಮ ಜೋಡೋ ಯಾತ್ರೆ. ನೀವು ಮಾಡುತ್ತಿರುವ ಅನಾಹುತ ಅಷ್ಟಿಷ್ಟಲ್ಲ. ನೀವು ಮಾಡಿದ ಪಾಪಕ್ಕೆ ಪಶ್ಚಾತ್ತಾಪ ಯಾತ್ರೆ ಮಾಡುವ ದಿನ ದೂರವಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಜಾತಿ ಗಣತಿಯನ್ನು ಮುನ್ನೆಲೆಗೆ ತಂದು ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜ ಸಮಾಜಗಳ ನಡುವೆ ವಿಷ ಹಿಂಡುತ್ತೀರಾ ಎಂದು ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ:
ಈ ವರದಿಯನ್ನು ಇಟ್ಟುಕೊಂಡು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಏನು ಮಾಡುತ್ತಾರೆ. ಏನು ಮಾಡುತ್ತೀರಿ ಡಿಸಿಎಂ ಡಿಕೆಶಿ ಅವರೇ.. ಪೆನ್ನು ಪೇಪರ್ ಕೇಳಿದ್ರಲ್ಲಾ.. ಪಾಪ ಜನರು ಕೊಟ್ಟಿದ್ದಾರೆ. ನೀವು ಆ ಪೆನ್ನು ಪೇಪರ್ ಯಾವುದಕ್ಕೆ ಉಪಯೋಗ ಮಾಡ್ತಿದ್ದೀರಾ? ನಿಮ್ಮ ಆತ್ಮಸಾಕ್ಷಿಯನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ.. ವೈಜ್ಞಾನಿಕವಾಗಿ ಸಮೀಕ್ಷೆ ಮಾಡೋಕೆ ಆಗಿಲ್ಲ ಅಂದರೆ ಹೇಗೆ? ಎಂದು ನಿಖಿಲ್ ಅವರು ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಹೆಗಲ ಮೇಲೆ ಖಾಲಿ ಗ್ಯಾಸ್ ಸಿಲಿಂಡರ್ ಎತ್ತೋಕೆ ನೀವೇ ಬೇಕಾ?:
ಪೆನ್ನು ಪೇಪರ್ ಕೊಡಿ ಅಂತ ಕೇಳಿ, ಅಂಗಲಾಚಿ ಪಡೆಕೊಂಡರಲ್ಲ ಡಿಕೆಶಿ ಅವರೇ.. ಮೊನ್ನೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಖಾಲಿ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಟ್ಟರಲ್ಲಾ.. ಖಾಲಿ ಗ್ಯಾಸ್ ಸಿಲಿಂಡರ್ ಎತ್ತೋಕೆ ನೀವೇ ಬೇಕಾ ಶಿವಕುಮಾರಣ್ಣ..? ಭಾರವನ್ನೆಲ್ಲಾ ಜನರ ಮೇಲೆ ಹಾಕಿ ನೀವು ಮಾತ್ರ ಖಾಲಿ ಸಿಲಿಂಡರ್ ಎತ್ತುತ್ತಿರಿ! ಅದಕ್ಕೆ ನೀವೇ ಬೇಕಾ? ಎಂತಹ ನಾಟಕ, ಎಂತಹ ನಟನೆ!? ನಿಮ್ಮಂತಹ ಡ್ರಾಮಾ ನೀವು. ಅದ್ಬುತ ನಟನೆ ಕಣ್ರಿ ನಿಮ್ದು. ಪರ್ಫಾರ್ಮೆನ್ಸ್ ಕಿಂಗ್ ಗಳು ಕಣ್ರೀ ನೀವೆಲ್ಲಾ.. ಎಂದು ವ್ಯಂಗ್ಯವಾಡಿದರು ನಿಖಿಲ್ ಕುಮಾರಸ್ವಾಮಿ ಅವರು.
ಜನರು ನೋವಿನಲ್ಲಿ ಇದ್ದಾರೆ. ನಿಮಗೆ ಪೆನ್ನು ಪೇಪರ್ ಕೊಟ್ಟಿದ್ದು ತಪ್ಪಾಯಿತು ಎಂಬ ಬೇಸರದಲ್ಲಿ ಇದ್ದಾರೆ. ಪೆನ್ನು ಪೇಪರ್ ಇಟ್ಟುಕೊಂಡು ಏನು ಮಾಡುತ್ತೀರಿ? ಬನ್ನಿ ಸಮಾಜ ಕಟ್ಟೋಣ. ಕೊಟ್ಟಿರೋ ಪೆನ್ನು ಪೇಪರ್ ಅನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ ಎಂದು ನಿಖಿಲ್ ಅವರು ಡಿಕೆಶಿ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.
2015ರಲ್ಲಿ ಕಾಂತರಾಜು ನೇತೃತ್ವದ ಆಗೀಗ ಸಮೀಕ್ಷೆ ಮಾಡಿತು. 54 ಮಾನದಂಡ ಅಂತ ಜಾತಿಗಣತಿ ಮಾಡಿರೋದಾಗಿ ಹೇಳಿದ್ದಾರೆ. ಸಮೀಕ್ಷೆ ಎಂದರೆ ಆ ಮನೆಯ ಸಂಪೂರ್ಣ ಮಾಹಿತಿ ಕಲೆಹಾಕಬೇಕು. ಅದು ಆಗಿಲ್ಲ. ಆ ಬಗ್ಗೆ ಸ್ವತಃ ಕಾಂತರಾಜು ಅವರೇ ಹೇಳಿಕೆ ನೀಡಿದ್ದರು. ಸಮರ್ಪಕವಾಗಿ ಸಮೀಕ್ಷೆ ನಡೆದಿಲ್ಲ ಎಂದು ಅವರೇ ಹೇಳಿ, ಸಮರ್ಪಕವಾಗಿ ಸಮೀಕ್ಷೆ ಮಾಡದಿದ್ದರೆ ಮತ್ತೆ ಸಮೀಕ್ಷೆ ಮಾಡಿಸುತ್ತೇವೆ, ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸುವ ಮಾತನ್ನಾಡಿದ್ದರು. ವೈಜ್ಞಾನಿಕವಾಗಿ ಸಮೀಕ್ಷೆ ಆಗಿಲ್ಲ ಎನ್ನುವ ಅಂಶವನ್ನು ಅವರೇ ಒಪ್ಪಿಕೊಂಡಿದ್ದರು. ಅವರ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಲಿಲ್ಲ. ಅದನ್ನು ಸರ್ಕಾರ ಒಪ್ಪಲಿಲ್ಲ.
ಅವರ ನಂತರ ಬಂದ ಜಯಪ್ರಕಾಶ್ ಹೆಗ್ಡೆ ಅವರು, ಸರಕಾರಕ್ಕೆ ಪತ್ರ ಬರೆದು, ವರದಿಯ ಕುಲಾತ್ತು ಹಸ್ತಪ್ರತಿ ನಾಪತ್ತೆಯಾಗಿದೆ ಎಂದು ಹೇಳುತ್ತಾರೆ. ಅವರು ಹಿಂದುಳಿದ ವರ್ಗಗಳ ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರದ ಸುಪರ್ದಿಯಲ್ಲಿ ಇದ್ದ ಮೂಲ ದಾಖಲಾತಿ ಹೇಗೆ ನಾಪತ್ತೆ ಆಯ್ತು? ಇದು ಯಕ್ಷ ಪ್ರಶ್ನೆ. ಈ ವರದಿ ತಯಾರಿಕೆ ಮಾಡೋದಕ್ಕೆ ₹170 ಕೋಟಿ ಜನರ ತೆರಿಗೆ ಹಣ ಖರ್ಚು ಮಾಡಿದ್ದಾರೆ. ಹಣವೂ ಹೋಯಿತು, ವರದಿಯೂ ಹೋಯಿತು! ಮೂಲ ಪ್ರತಿ ಏನಾಯ್ತು? ಅದಕ್ಕೇ ರೆಕ್ಕಪುಕ್ಕ ಬಂದು ಹಾರಿ ಹೋಯ್ತಾ? ಎಂದು ಸರ್ಕಾರದ ಮೇಲೆ ಇನ್ನಿಲ್ಲದ ವಾಗ್ದಾಳಿ ನಡೆಸಿದರು ನಿಖಿಲ್ ಕುಮಾರಸ್ವಾಮಿ.
ಕುಟುಂಬದವರಿಂದ ಸಹಿ ಮಾಡಿಸಿಕೊಂಡಿದ್ದಾರೆ!
ಜಯಪ್ರಕಾಶ್ ಹೆಗ್ಡೆ ಅವರ ಐದು ವರ್ಷಗಳ ಅವಧಿ ಮುಗಿದ ಮೇಲೂ 2 ತಿಂಗಳು ವಿಸ್ತರಣಾ ಅವಕಾಶ ಕೊಡಲಾಯಿತು. ಅಷ್ಟು ವರ್ಷ ವರದಿ ವರದಿ ಕೊಡದ ಇವರು ಕೇವಲ ಎರಡೇ ತಿಂಗಳಲ್ಲಿ, ವಿಸ್ತರಣಾ ಅವಕಾಶ ಸಿಕ್ಕಿದ ಅರವತ್ತೇ ದಿನದಲ್ಲಿ ವರದಿ ತಯಾರು ಮಾಡಿಕೊಡುತ್ತಾರೆ!? ಇದು ಗಾಳಿ, ಬೆಳಕಿಗಿಂತ ವೇಗವಾಗಿ ಹೇಗೆ ಜಾತಿಗಣತಿ ಸಿದ್ದ ಆಯ್ತು? ಆ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕುತ್ತಾರೆ! ಆ ಸದಸ್ಯ ಕಾರ್ಯದರ್ಶಿ ಯಾರು? ಅವರು ಯಾವ ಶ್ರೇಣಿಯ ಅಧಿಕಾರಿ? ಯಾರ ಸಂಬಂಧಿ? ಸಿದ್ದರಾಮಯ್ಯ ಅವರಿಗೂ ಯಾವ ರೀತಿಯ ನೆಂಟಸ್ತನ ಇದೆ? ಇದೆಲ್ಲವನ್ನೂ ತಿಳಿದುಕೊಳ್ಳುವ ಅಧಿಕಾರ ಸಾಮಾನ್ಯ ಪ್ರಜೆಯಾಗಿ ನನಗೆ ಇದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಜಾತಿ ಮತ್ತು ಧರ್ಮದಿಂದ ಹೊಟ್ಟೆ ತುಂಬುವುದಿಲ್ಲ:
ಜಾತಿ ಗಣತಿ ಮೂಲಕ ಏನ್ ಮಾಡುವುದಕ್ಕೆ ಹೊರಟ್ಟಿದ್ದೀರಿ ಸಿದ್ದರಾಮಯ್ಯನವರೇ? ಇದು ಜಾತಿ ಗಣತಿನಾ? ಈಗ ನಿಮ್ಮ ಕಡೆಯಿಂದ ಸೋರಿಕೆ ಆಗಿರುವ ವರದಿ ನೋಡಿದರೆ ನೋಡಿದರೆ ಪಾಪ.. ಸಚಿವರಿಗೂ ಮಾತನಾಡುವುದಕ್ಕೆ ಸಾಧ್ಯ ಆಗುತ್ತಿಲ್ಲ. ಜಾತಿ ಮತ್ತು ಧರ್ಮದಿಂದ ಯಾರ ಹೊಟ್ಟೆ ತುಂಬುವುದಿಲ್ಲ. ಮೊದಲು ಬಡವರನ್ನು ಗುರುತಿಸಿ, ಅವರನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕು. ಅದನ್ನು ಗಣತಿ ಮಾಡಿಕೊಂಡು ಸಮಾಜವನ್ನು ಇನ್ನಷ್ಟು ಅಧಃಪತನಕ್ಕೆ ತಳ್ಳಿದರೆ ಉಪಯೋಗ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಗಣತಿ ವರದಿ ಅನ್ನಬೇಕಾ? ಎಂದು ವರದಿಯ ಪ್ರತಿಯನ್ನು ಕೈಯ್ಯಲ್ಲಿ ಹಿಡಿದು ತೋರಿಸಿದ ನಿಖಿಲ್ ಕುಮಾರಸ್ವಾಮಿ ಅವರು; ಅಮಾಯಕರ ಕೈಯಲ್ಲಿ ಪೆನ್ನು ಪೇಪರ್ ಕೊಟ್ಟು ಗಣತಿ ವರದಿ ಬರೆಸಿದ್ದೀರಿ. ಹತ್ತು ವರ್ಷದಲ್ಲಿ ಆಗದೇ ಇರುವ ವರದಿ ಅರವತ್ತು ದಿನದಲ್ಲಿ ಸಿದ್ಧವಾಗಿದೆ. ರಾಕೆಟ್ ವೇಗದಲ್ಲಿ, ಅದೂ ಬೆಳಕು, ಗಾಳಿಗಿಂತ ವೇಗದಲ್ಲಿ ವರದಿ ತಯಾರಾಗಿದೆ ಎಂದು ಕಿಡಿಕಾರಿದರು.
ಜನಪರವಾಗಿ ಮಾಡಿರುವ ಸಾಧನೆ ತೋರಿಸಿ:
ಎರಡು ವರ್ಷದ ಆಡಳಿತದಲ್ಲಿ ನಿಮ್ಮ ಸಾಧನೆ ಏನು? ಇನ್ನು ಮೂರು ವರ್ಷ ಮಾತ್ರ ಸಿದ್ದರಾಮಯ್ಯ ಅವರು ಸಿಎಂ ಆಗಿರಬಹುದು ಅಷ್ಟೇ. ಸಿದ್ದರಾಮಯ್ಯ ಅವರೇ.. ಜನಪರವಾಗಿ ಮಾಡಿರುವ ಒಂದು ಸಾಧನೆ ತೋರಿಸಿ ನೋಡೋಣ. ಎರಡು ವರ್ಷ ಆಯಿತು ನೀವು ಅಧಿಕಾರಕ್ಕೆ ಬಂದು. ನಿಮ್ಮ ಸಾಧನೆ 16ನೇ ಬಜೆಟ್ ಮಂಡನೆ ಮಾಡಿದ್ದು, ಬಜೆಟ್ನ ಒಟ್ಟು ಗಾತ್ರ ₹4,09,549 ಕೋಟಿಗೆ ಏರಿಸಿದ್ದು, ಇದರಲ್ಲಿ ₹1.16 ಲಕ್ಷ ಕೋಟಿ ಸಾಲ ಹೊರಟಿದ್ದೀರಿ. ಬಜೆಟ್ ಜಾಸ್ತಿ ಮಾಡು, ಹೊಸದಾಗಿ ಸಾಲ ಮಾಡು.. ರಾಜ್ಯದ ಒಟ್ಟು ಸಾಲ ₹7.64 ಲಕ್ಷ ಕೋಟಿಗೆ ಹೋಗಿದೆ. ಯಾರು ಈ ಸಲ ತೀರಿಸುತ್ತಾರೆ? ಎಂದು ತೀಕ್ಷ್ಣವಾಗಿ ಪ್ರಶ್ನೆ ಮಾಡಿದರು.
ಕಾಕಾ ಪಾಟೀಲ್ ಮಕ್ಕಳ ಮೇಲೂ ಸಾಲ, ಮಹದೇವಪ್ಪನ ಮಕ್ಕಳ ತಲೆ ಮೇಲೆಯು ಸಾಲ ಇದೆ. ನಿಮ್ಮ ಮಕ್ಕಳು, ನಮ್ಮ ಮಕ್ಕಳ ಮೇಲೂ ಸಾಲ ಇದೆ. ಇದೇನಾ ನಿಮ್ಮ ಸಾಧನೆ ಸಿದ್ದರಾಮಯ್ಯ ಅವರೇ? ಹೇಗೆ ಇತಿಹಾಸ ನಿರ್ಮಾಣ ಮಾಡಿಕೊಳ್ತೀರಾ ನೋಡಿ ಎಂದು ತರಾಟೆಗೆ ತೆಗೆದುಕೊಂಡರು.
ಹೀಗೆ ಸಾಲ ಮಾಡಿಕೊಂಡು ಬಜೆಟ್ ಜಾಸ್ತಿ ಮಾಡಿಕೊಂಡು ಬಜೆಟ್ ಮಾಡೋಕೆ ನೀವೇ ಬೇಕಾ ಸಿದ್ದರಾಮಯ್ಯ ಅವರೇ. ಇದಕ್ಕೆ ಹದಿನಾರು ಬಜೆಟ್ ಮಂಡಿಸಬೇಕಾ? ರಾಜ್ಯವನ್ನು ದಿವಾಳಿ ಮಾಡುತ್ತಿದ್ದೀರಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.
ಸಾಧನೆ ಶೂನ್ಯ, ಅಬ್ಬರ ಹೆಚ್ಚು:
ರಾಜ್ಯ ಕಾಂಗ್ರೆಸ್ ಸರಕಾರದ ಸಾಧನೆ ಶೂನ್ಯ. ಆದರೆ ಆರ್ಭಟ ಮಾತ್ರ ಜಾಸ್ತಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಆರೋಪಿಸಿದರು.
ಕೇಂದ್ರದ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ಅವರಿಗೆ ಮಾತನಾಡಲಿಕ್ಕೆ ವಿಷಯವೇ ಇರಲಿಲ್ಲ. ಅದಕ್ಕೆ ಕುಮಾರಸ್ವಾಮಿ ಅವರತ್ತ ಬಾಣ ತಿರುಗಿಸುತ್ತಾರೆ. ಕೇಂದ್ರ ಸಚಿವರ ಬಗ್ಗೆ ಮಾತನಾಡಿದರೆ ಪ್ರಚಾರ ಸಿಗುತ್ತೆ, ಮಾಧ್ಯಮಗಳು ಗಮನಿಸುತ್ತವೆ ಎನ್ನುವ ಅಭಿಪ್ರಾಯ ಅವರಲ್ಲಿದೆ. ಅದಕ್ಕೆ ಸುತ್ತಿ ಸುತ್ತಿ ಕುಮಾರಸ್ವಾಮಿ ಅವರ ವಿರುದ್ಧವೇ ಅವರು ವಾಗ್ದಾಳಿ ನಡೆಸುತ್ತಾರೆ. ತಮ್ಮ ಹೇಳಿಕೆಗೆ ಹೆಚ್ಡಿಕೆ ಪ್ರತಿಕ್ರಿಯೆ ಕೊಡುತ್ತಾರೆ, ಆಗ ತಮ್ಮ ಹೇಳಿಕೆ ಜೀವಂತ ಇರುತ್ತದೆ ಎನ್ನುವ ಐಡಿಯಾ ಅವರದ್ದು. ಅದನ್ನು ಬಿಟ್ಟು ತಮ್ಮ ಸಾಧನೆ ಹೇಳಲು ಅವರಿಗೆ ಆಗುತ್ತಿಲ್ಲ. ಯಾಕೆಂದರೆ ಅವರ ಸಾಧನೆ ಸೊನ್ನೆ ಎಂದು ಅವರು ತಿರುಗೇಟು ಕೊಟ್ಟರು.
ನಾನು ಹೆದರುವ ಮಗ ಅಲ್ಲಾ ಎಂದು ಡಿಕೆಶಿ ಪದೇಪದೆ ಹೇಳುತ್ತಾರೆ. ಹೆದರಿ ಎಂದು ಯಾರು ಹೇಳುತ್ತಾರೆ? ಯಾರು ಯಾರಿಗೆ ಹೆದರಬೇಕು? ಯಾಕೆ ಹೆದರಬೇಕು ಹೇಳಿ? ಅಂತಿಮವಾಗಿ ಪ್ರಪಂಚವನ್ನು ಬಿಟ್ಟು ಹೋಗೋವಾಗ ಆರು ಅಡಿ ಮೂರು ಅಡಿ ಮಾತ್ರ ಅಲ್ಲವಾ? ಅಲ್ಲಿಗೆ ಹೋಗುವ ಮುನ್ನ ನಾವು ಏನೆಲ್ಲಾ ಮಾಡಿದ್ದೇವೆ ಎಂದು ಯೋಚನೆ ಮಾಡಬೇಕು. ಆತ್ಮಸಾಕ್ಷಿಯನ್ನು ಪ್ರಶ್ನೆ ಮಾಡಿಕೊಡರೆ ಸಾಕು ಎಂದು ಡಿಕೆಶಿ ಹೇಳಿಕೆಗೆ ನಿಖಿಲ್ ಅವರು ಕೌಂಟರ್ ಕೊಟ್ಟರು.
ಕಾಂಗ್ರೆಸ್ ಹೈಕಮಾಂಡ್ ಡಮ್ಮಿ ಹೈಕಮಾಂಡ್
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಡಮ್ಮಿ ಹೈಕಮಾಂಡ್ ಅಂತ ಜನ ತೀರ್ಮಾನ ಮಾಡಿದ್ದಾರೆ. ಏಕೆಂದರೆ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಅರ್ಥವಾಗುತ್ತದೆ. ಸರ್ಕಾರದ ಮೇಲೆ ನಿಯಂತ್ರಣ ಇಲ್ಲ. ಜಾತಿ ಗಣತಿಯ ಗದ್ದಲ ನೋಡಿದರೆ ಕಾಂಗ್ರೆಸ್ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಡಮ್ಮಿ ಅಂತ ನಾನು ಹೇಳುತ್ತಿಲ್ಲ. ಅವರ ಬಗ್ಗೆ ನನಗೆ ಗೌರವ ಇದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಕೆಅನ್ನದಾನಿ, ಶ್ರೀ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ , ವಕ್ತಾರರಾದ ಹೆಚ್.ಎನ್. ದೇವರಾಜು, ನರಸಿಂಹಮೂರ್ತಿ, ರಾಜೂಗೌಡ ಮುಂತಾದ ಮುಖಂಡರು ಉಪಸ್ಥಿತರಿದ್ದರು.