ಬೆಂಗಳೂರು:- ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸಿಟಿ ಮಂದಿ ಅಕ್ಷರಶಃ ನಲುಗಿ ಹೋಗಿದ್ದಾರೆ. ಅಲ್ಲದೇ ನಗರದ ಅಲ್ಲಲ್ಲಿ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ. ಅಲ್ಲದೇ ರಣಭೀಕರ ಮಳೆಗೆ ಸಧ್ಯ ರಾಜಧಾನಿ ಸ್ಥಿತಿ ಹೇಳತ್ತಿರದ್ದಾಗಿದೆ.
ಸುರಿದ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾದ ಬಳಿಕ ಬಿಬಿಎಂಪಿ ಎಚ್ಚೆತ್ತುಕೊಂಡಿದೆ. ಅನಾಹುತ ತಪ್ಪಿಸಲು ಹಲವು ಕ್ರಮಗಳನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದೆ. ಜಲ ಭದ್ರತೆ ಮತ್ತು ವಿಪತ್ತು ಸ್ಥಿತಿ ಸ್ಥಾಪಕತ್ವ ಯೋಜನೆ ಅಡಿ 173 ಕಿ.ಮೀ. ಮಣ್ಣಿನ ಕಾಲುವೆಗಳಿಗೆ ಆರ್ಸಿಸಿ ತಡೆಗೋಡೆ ನಿರ್ಮಾಣ ಮಾಡಲು ಮುಂದಾಗಿದೆ. ಬೃಹತ್ ನೀರು ಕಾಲುವೆಗಳ ಒತ್ತುವರಿ ತೆರವಿಗೆ ಪರಿಣಾಮಕಾರಿ ಕ್ರಮಕೈಗೊಳ್ಳಲು ಯೋಚಿಸಿದೆ. ಹಾಗೇ, ಕೆರೆಗಳಿಗೆ ತೂಬು ಕಾಲುವೆ ಅಳವಡಿಸಿ ಪ್ರವಾಹ ತಡೆಗಟ್ಟಲು ಹೊರಟಿದೆ.
ಇನ್ನು, ಈವರೆಗೆ ಕೈಗೊಂಡ ಕ್ರಮಗಳ ಕುರಿತಾಗಿ ಬಿಬಿಎಂಪಿ ಮಾಹಿತಿ ಹಂಚಿಕೊಂಡಿದೆ. ಮಹದೇವಪುರ ವಲಯದಲ್ಲಿ ನೀರಿನ ಪ್ರಮಾಣ ಶೇ 80 ರಷ್ಟು ಇಳಿಕೆಯಾಗಿದೆ. ಸಾಯಿ ಲೇಔಟ್ ಪ್ರದೇಶದಲ್ಲಿ ಸ್ಥಳೀಯರ ನೆರವಿಗೆ ಆರೋಗ್ಯ ಶಿಬಿರ ಆರಂಭಿಸಲಾಗಿದೆ. ಬೊಮ್ಮನಹಳ್ಳಿ ವಲಯದ ಹೆಚ್ಎಸ್ಆರ್ ಹಾಗೂ ಅನುಗ್ರಹ ಲೇಔಟ್ನಲ್ಲಿ ಪಂಪ್ ಸೆಟ್ ಮೂಲಕ ನೀರು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಪಶ್ಚಿಮ ವಲಯದ ಕೆ. ಆರ್ ಮಾರ್ಕೆಟ್ ಸುತ್ತಮುತ್ತ ಕೊಳಚೆ ನೀರು ತೆರವು ಮಾಡಲಾಗಿದೆ. ದಕ್ಷಿಣ ವಲಯದ ಸಿಲ್ಕ್ ಬೋರ್ಡ್ ಜಲಾವೃತ ಹಾಗೂ ಕೆಎಎಸ್ ಆಫೀಸರ್ಸ್ ಲೇಔಟ್ ಬಳಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಾಗಿದೆ. ಆರ್ಆರ್ ನಗರ ವಲಯದ ಅಂದರಹಳ್ಳಿ ಜನನಿ ಶಾಲೆ ಬಳಿ ತಡೆಗೋಡೆ ದುರಸ್ತಿ, ವಿದ್ಯುತ್ ಕಂಬ ಸಹ ಹಾನಿಯಾಗಿದ್ದು, ಈ ಸಂಬಂಧ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಿದೆ.
ಜವರೇಗೌಡ ದೊಡ್ಡಿ ಬಳಿ ಜಲಾವೃತ ಆಗಿದ್ದ ಪ್ರದೇಶದಲ್ಲಿ ನೀರು ತೆರವು ಮಾಡಲಾಗಿದೆ. ವಿದ್ಯಾಮಂದಿರ ಶಾಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಗೋಡೆ ತೆರವು ಮಾಡಲಾಗಿದೆ.