ರಾಮ್ ಚರಣ್ ತ್ರಿಬಲ್ ಆರ್ ಸಕ್ಸಸ್ ಬಳಿಕ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಚೆರ್ರಿ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ವಿಶೇಷ ಗೌರವ ಸಲ್ಲಿಸುತ್ತಿದೆ. ಲಂಡನ್‌ನಲ್ಲಿರುವ ಮೇಡಂ ಟುಸಾಡ್ಸ್ ಮ್ಯೂಸಿಯಂನಲ್ಲಿ ರಾಮ್ ಚರಣ್ ಅವರ ಮೇಣದ ಪ್ರತಿಮೆ ನಿರ್ಮಾಣವಾಗಿದ್ದು, ಅದನ್ನು ಮೇ 9ಕ್ಕೆ ಅವರು ಅನಾವರಣಗೊಳಿಸಲಿದ್ದಾರೆ. ಅದಕ್ಕಾಗಿ ರಾಮ್ ಲಂಡನ್‌ಗೆ ತೆರಳಲಿದ್ದಾರೆ.
ಜಗತ್ತಿನಾದ್ಯಂತ ಬೇರೆ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗಳಲ್ಲಿ ಈಗಾಗಲೇ ತೆಲುಗಿನ ಬೇರೆ ಬೇರೆ ಕಲಾವಿದರ ಪ್ರತಿಮೆಗಳಿವೆ. ‘ಬಾಹುಬಲಿ’ ನಟ ಪ್ರಭಾಸ್, ಮಹೇಶ್ ಬಾಬು, ಕಾಜಲ್ ಅಗರ್ವಾಲ್, ತಮಿಳು ನಟ ಸತ್ಯರಾಜ್ ಮುಂತಾದವರ ಅವರ ಮೇಣದ ಪ್ರತಿಮೆಗಳು ಮೇಡಮ್ ಟುಸ್ಸಾಡ್ಸ್‌ನಲ್ಲಿವೆ. ಸಿಂಗಾಪುರದ ಮೇಡಮ್ ಟುಸ್ಸಾಡ್ಸ್‌ನಲ್ಲಿ ಕಾಜಲ್ ಅಗರ್ವಾಲ್ ಮತ್ತು ಮಹೇಶ್ ಬಾಬು ಅವರ ಪ್ರತಿಮೆಗಳು ಇದ್ದರೆ, ಬಾಹುಬಲಿ ಪಾತ್ರದಲ್ಲಿರುವ ಪ್ರಭಾಸ್ ಮತ್ತು ಕಟ್ಟಪ್ಪ ಪಾತ್ರದಲ್ಲಿರುವ ಸತ್ಯರಾಜ್ ಅವರ ಮೇಣದ ಪ್ರತಿಮೆಗಳು ಲಂಡನ್‌ನ ಮೇಡಮ್ ಟುಸ್ಸಾಡ್ಸ್‌ನಲ್ಲಿವೆ. ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಇದೆ. ಇದೀಗ ಈ ಪಟ್ಟಿಗೆ ರಾಮ್ ಚರಣ್ ಕೂಡ ಸೇರ್ಪಡೆಯಾಗಲಿದ್ದಾರೆ.
ರಾಮ್ ಚರಣ್ ಮೇಣದ ಪ್ರತಿಮೆಯ ವಿಶೇಷ ಏನೆಂದರೆ, ಅವರ ಜೊತೆ ಮುದ್ದಿನ ಶ್ವಾನದ ಪ್ರತಿಮೆ ಕೂಡ ಇರಲಿದೆ. ಹೇಳಿಕೇಳಿ ಚೆರ್ರಿ ಪ್ರಾಣಿ ಪ್ರಿಯ. ರಾಮ್ ರೈಮ್ ಎಂಬ ಶ್ವಾನವನ್ನು ಸಾಕಿದ್ದಾರೆ. ವಿದೇಶಕ್ಕೆ ಪ್ರಯಾಣ ಮಾಡುವಾಗಲೂ ಕೂಡ ಅವರು ಆ ಶ್ವಾನವನ್ನು ಕರೆದುಕೊಂಡು ಹೋಗುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ರೈಮ್ ಜೊತೆ ನಂಟು ಇದೆ. ಈ ಕಾರಣದಿಂದ ಮೇಣದ ಪ್ರತಿಮೆಯ ಜೊತೆ ರೈಮ್ನ ಪ್ರತಿಮೆ ಕೂಡ ಇರಲಿದೆ. ರಾಮ್‌ಚರಣ್ ತಮ್ಮ ಮೊದಲ ಮೇಣದ ಪ್ರತಿಮೆಯನ್ನು ಮೇ 9 ರಂದು ಮೇಡಮ್ ಟುಸ್ಸಾಡ್ಸ್ ಲಂಡನ್‌ನಲ್ಲಿ ಅನಾವರಣಗೊಳಿಸಲಿದ್ದು, ನಂತರ ಅದು ಶಾಶ್ವತವಾಗಿ ಮೇಡಮ್ ಟುಸ್ಸಾಡ್ಸ್ ಸಿಂಗಾಪುರಕ್ಕೆ ಸ್ಥಳಾಂತರಗೊಳ್ಳಲಿದೆ.