ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ತವರಲ್ಲೇ ಮೂರು ಪಂದ್ಯಗಳನ್ನು ಸೋತಿದೆ.
ಮಳೆಯಿಂದ 14 ಓವರ್ಗಳಿಗೆ ಕಡಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 9 ವಿಕೆಟ್ ಕಳೆದುಕೊಂಡು 95ರನ್ಗಳಿಸಿತ್ತು. 96ರನ್ಗಳ ಗುರಿಯನ್ನ ಪಂಜಾಬ್ ಕಿಂಗ್ಸ್ 13 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು. ಈ ಗೆಲಯವಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಗೆಲುವು ಪಡೆದು 2ನೇ ಸ್ಥಾನಕ್ಕೇರಿದರು.
96 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಕೂಡ 96 ರನ್ಗಳ ಅಲ್ಪಮೊತ್ತದ ಗುರಿಯನ್ನ ಸುಲಭವಾಗಿ ಬೆನ್ನಟ್ಟಲಿಲ್ಲ. 12. ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಕಷ್ಟಪಟ್ಟು ಗೆಲುವು ಸಾಧಿಸಿತು. ಆರಂಭಿಕರಾದ ಪ್ರಭಸಿಮ್ರನ್ ಸಿಂಗ್ 11 ಎಸೆತಗಳಲ್ಲಿ 16 ಭುವನೇಶ್ವರ್ ಬೌಲಿಂಗ್ನಲ್ಲಿ ಟಿಮ್ ಡೇವಿಡ್ಗೆ ಕ್ಯಾಚ್ ನೀಡಿದರು. ನಂತರ 4ನೇ ಓವರ್ನಲ್ಲಿ ಪ್ರಿಯಾಂಶ್ ಆರ್ಯ 9 ಎಸೆತಗಳಲ್ಲಿ 13 ರನ್ಗಳಿಸಿ ಹ್ಯಾಜಲ್ವುಡ್ಗೆ ವಿಕೆಟ್ ಒಪ್ಪಿಸಿದರು. ನಂತರ ಹ್ಯಾಜಲ್ವುಡ್ 8ನೇ ಓವರ್ನಲ್ಲಿ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ (7) ಹಾಗೂ ಜೋಶ್ ಇಂಗ್ಲಿಸ್(14) ವಿಕೆಟ್ ಪಡೆದು ಆರ್ಸಿಬಿಗೆ ಗೆಲುವಿನ ಆಸೆ ಮೂಡಿಸಿದ್ದರು.
ಒಂದು ಹಂತದಲ್ಲಿ ಪಂಜಾಬ್ 53 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ನೆಹಾಲ್ ವಧೇರಾ ಅದಕ್ಕೆ ಅವಕಾಶ ಕೊಡಲಿಲ್ಲ. ಅವರು 19 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 33 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಆರ್ಸಿಬಿ ಪರ ಜೋಶ್ ಹ್ಯಾಜಲ್ವುಡ್ 14 ರನ್ ನೀಡಿ 3 ವಿಕೆಟ್ ಪಡೆದರೆ, ಭುವನೇಸ್ವರ್ ಕುಮಾರ್ 26ರನ್ ನೀಡಿ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮಳೆಯಿಂದ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರಿನ ಅಂಗಳದಲ್ಲಿ ಮತ್ತೆ ವೈಫಲ್ಯ ಅನುಭವಿಸಿತು. ಆರಂಭಿಕರು ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಪಂಜಾಬ್ ಬೌಲರ್ಗಳ ಮುಂದೆ ಬ್ಯಾಟಿಂಗ್ ಮರೆತವರೆಂತೆ ಪ್ರವರ್ತಿಸಿದರು.