ಏಪ್ರಿಲ್ 14, ಕನ್ನಡ ಮಾತ್ರವಲ್ಲ ಭಾರತೀಯ ಚಿತ್ರರಂಗದ ಪಾಲಿಗೆ ವಿಶೇಷ ದಿನ. ಇಂದಿಗೆ “ಕೆಜಿಎಫ್ ಚಾಪ್ಟರ್ 2” ಸಿನಿಮಾ ಬಿಡುಗಡೆ ಆಗಿ ಮೂರು ವರ್ಷಗಳಾಗಿವೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದು ಭಾರತೀಯ ಆಕ್ಷನ್ ಸಿನಿಮಾಕ್ಕೆ ಹೊಸ ವ್ಯಾಖ್ಯಾನ ನೀಡಿದ ಈ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಪಾತ್ರದಲ್ಲಿ ಮಿಂಚು ಹರಿಸಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿದ್ದಾರೆ. ಹಲವು ದಾಖಲೆ ಬರೆದ ಕೆಜಿಎಫ್ 2 ಮೂರು ವರ್ಷದ ಕ್ಷಣದಲ್ಲಿ ಹೊಂಬಾಳೆ ಸಂಸ್ಥೆ ಚಾಪ್ಟರ್ 3 ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟಿದೆ. ಈ ನಡುವೆ ರಾಕಿಭಾಯ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.
ಕಳೆದೊಂದು ಮೂರು ವಾರದಿಂದ ಟಾಕ್ಸಿಕ್ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿತ್ತು. ಹೀಗಾಗಿ ಪತ್ನಿ ಸಮೇತ ಮುಂಬೈನಲ್ಲಿ ಬೀಡುಬಿಟ್ಟಿದ್ದ ಯಶ್ ಇಂದು ಬೆಂಗಳೂರಿನತ್ತ ಹೊರಟಿದ್ದಾರೆ. ಪತ್ನಿ ರಾಧಿಕಾ ಜೊತೆ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಟಾಕ್ಸಿಕ್ ಚಿತ್ರದ ಕೆಲ ದೃಶ್ಯಗಳ ಚಿತ್ರೀಕರಣ ನಡೆಸಿ ಬೆಂಗಳೂರಿನತ್ತ ಯಶ್ ಹೊರಟಿದ್ದಾರೆ.
ಟಾಕ್ಸಿಕ್ ಸಿನಿಮಾದ ಚಿತ್ರೀಕರಣ 2024ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು. ಗೀತು ಮೋಹನ್‌ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದೇ ಏಪ್ರಿಲ್ಗೆ ತೆರೆಗಪ್ಪಳಿಸಬೇಕಿತ್ತು. ಆದ್ರೆ ಮುಂದಿನ ವರ್ಷ ಮಾರ್ಚ್ 19ಕ್ಕೆ ವಿಶ್ವಾದ್ಯಂತ ತೆರೆಕಾಣಲಿದೆ. ಕನ್ನಡದ ಜೊತೆಗೆ ಇಂಗ್ಲೀಷ್ ನಲ್ಲಿ ಟಾಕ್ಸಿಕ್ ಚಿತ್ರದ ಶೂಟಿಂಗ್ ನಡೆಸಲಾಗುತ್ತಿದೆ.