ಕೊಪ್ಪಳ : ಅಂಜನಾದ್ರಿ ಬೆಟ್ಟಕ್ಕೆ ತನ್ನದೇ ಐತಿಹ್ಯ ಇದ್ದು, ಪ್ರಸಿದ್ಧ ಧಾರ್ಮಿಕ ಪ್ರವಾಸಿ ತಾಣವಾಗಿದೆ. ಇದೀಗ ಐತಿಹಾಸಿಕ ಹಿನ್ನೆಲೆಯುಳ್ಳ ಆಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ಸರ್ಕಾರ ಮುಂದಾಗಿದೆ.
ಹೌದು, ಗಂಗಾವತಿ ತಾಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಹೀಗಾಗಿ ಕಳೆದ ಗುರುವಾರ ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ನೇತೃತ್ವದಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಟ್ಟದ ಹಿಂಬದಿಯಿಂದ ರೋಪ್ ವೇ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಲಾಗಿದ್ದು, 450 ಮೀ. ಉದ್ದದ ರೋಪ್ ವೇ ನಿರ್ಮಾಣಕ್ಕೆ ನಿರ್ಧರಿಸಿದೆ. ಅದರಲ್ಲಿ ಒಂದು ಗಂಟೆಯಲ್ಲಿ 800 ಭಕ್ತಾಧಿಗಳನ್ನು ಅಂಜನಾದ್ರಿ ಬೆಟ್ಟದ ಮೇಲೆ ತಲುಪಿಸಬಹುದಾಗಿದೆ.
ಇನ್ನೂ ಈ ಬಗ್ಗೆ ಮಾತನಾಡಿರುವ ಶಾಸಕ ಗಾಲಿ ಜನಾರ್ದನ ರೆಡ್ಡಿ, ಅಂಜನಾದ್ರಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಜೊತೆ ಮಾತುಕತೆ ನಡೆಸಿ, ರೋಪ್ ವೇ ನಿರ್ಮಾಣ ಕ್ಕೆ ಮನವಿ ಮಾಡಿಕೊಂಡಿದ್ದೆ. ಮನವಿಗೆ ಸ್ಪಂದಿಸಿ, ರೋಪ್ ವೇ ನಿರ್ಮಾಣ ಒಪ್ಪಿಗೆ ಸಿಕ್ಕಿದೆ. ರಾಜ್ಯ ಸರ್ಕಾರ ಕೂಡ ಅನುಮೋದನೆಯನ್ನು ನೀಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗುವುದು ಎಂದರು.