ಬೈಲಹೊಂಗಲ:- ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬೈಲಹೊಂಗಲದ ರೂಪಾ ಚನಗೌಡ ಪಾಟೀಲ್ 625 ಕ್ಕೆ 625 ಅಂಕ ಪಡೆದು ಇಡೀ ರಾಜ್ಯಕ್ಕೆ ಮೊದಲ ರ್ಯಾಂಕ್ ಪಡೆದು ಎಲ್ಲರಿಗೂ ಮಾದರಿ ಆಗಿದ್ದಾರೆ.
ಬೈಲಹೊಂಗಲ ತಾಲೂಕಿನ ದೇವಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ 625ಕ್ಕೆ 625 ಅಂಕ ಪಡೆದಿರುವ ರೂಪಾ ಚನಗೌಡ ಪಾಟೀಲ್ ಅವರು ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾದರಿ ಆಗಿದ್ದಾರೆ. ಈ ಹಿನ್ನೆಲೆ ಹುಕ್ಕೇರಿ ಹಿರೇಮಠದ ಶ್ರೀ ಷ, ಬ್ರ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳವರು ತಾವೇ ಖುದ್ದಾಗಿ ವಿದ್ಯಾರ್ಥಿನಿ ರೂಪಾ ಪಾಟೀಲ್ ಮನೆಗೆ ಭೇಟಿ ನೀಡಿ ಆಶೀರ್ವದಿಸಿದರು. ಶ್ರೀಗಳು ಮನೆಗೆ ಆಗಮಿಸುತ್ತಿದ್ದಂತೆ ರೂಪಾ ಚನಗೌಡ ಪಾಟೀಲ್ ಶ್ರೀಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದಿದ್ದಾರೆ.
ಬಳಿಕ ಮಾತನಾಡಿದ ರೂಪಾ ಪಾಟೀಲ್, ಇಂದು ನಮ್ಮ ಮನೆಗೆ ನಮ್ಮ ಗುರುಗಳು ಬಂದು ಆಶೀರ್ವಾದ ಮಾಡಿದ್ದಾರೆ. ಇದು ನನ್ನ ಭಾಗ್ಯ. ನನ್ನ ಬದುಕಿನೊಳಗೆ ಇದೊಂದು ಅವಿಸ್ಮರಣೀಯ ದಿನ. ಗುರುಗಳ ಅಂತಃಕರಣ ಎಷ್ಟು ದೊಡ್ಡದು ಅಂದ್ರೆ ಭಕ್ತರನ್ನು ತಮ್ಮ ಮಕ್ಕಳಂತೆ ನೋಡುತ್ತಾರೆ. ಇಂತಹ ಮಹಾನ್ ಶ್ರೀಗಳು ಇಂದು ನನಗೆ ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ನಾನು ಅವರ ಪಾದಪೂಜೆ ಮಾಡಿ ಸನ್ಮಾನ ಸ್ವೀಕರಿಸಿದ್ದೇನೆ.
ನನ್ನ ಶಿಕ್ಷಕರು, ಪಾಲಕರು, ತುಂಬಾ ಪರಿಶ್ರಮ ಪಟ್ಟು ನನ್ನನ್ನು ಓದಿಸಿದ್ದಾರೆ. ಮುಂದೆಯೂ ಅವರ ಹೆಸರನ್ನು ಉಳಿಸಿ ವೈದ್ಯೆ ಆಗಬೇಕೆನ್ನುವ ನನ್ನ ಕನಸನ್ನು ಈಡೇರಿಸಿಕೊಳ್ಳುವ ಗುರಿ ಇದೆ ಎಂದರು.
ಬಳಿಕ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಇಂದು ಗ್ರಾಮೀಣ ಪ್ರದೇಶದ ಪ್ರತಿಭೆ ಇಂದು SSLC ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲು ಬಂದಿರೋದು ಅತೀವ ಸಂತೋಷ ತಂದಿದೆ. ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದಲ್ಲಿ ಓದಿದವರೂ ಕೂಡ ಸಾಧಿಸಬಹುದು ಎಂಬುವುದಕ್ಕೆ ಉದಾಹರಣೆ ಇದು. ಅದಕ್ಕಾಗಿ ನಾವೆಲ್ಲರೂ ಸರ್ಕಾರಿ ಶಾಲೆಗಳಲ್ಲಿ ಓದಿ ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಹುದು ಎಂಬುವುದಕ್ಕೆ ರೂಪಾ ಅವರು ಮಾದರಿ ಆಗಿದ್ದಾರೆ. ವಿದ್ಯಾರ್ಥಿನಿಗೆ ಒಳಿತಾಗಲಿ ಎಂದು ಆಶೀರ್ವದಿಸಿದರು.
ನಂತರ ಬೈಲಹೊಂಗಲದ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಮುಜರಾಯಿ ಇಲಾಖೆಯ ನಿರ್ದೇಶಕರಾದ ಡಾ. ಮಹಾಂತೇಶ್ ಶಾಸ್ತ್ರೀಗಳು ಮಾತನಾಡಿ, SSLC ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಮೊದಲು ಬಂದಿರುವ ವಿದ್ಯಾರ್ಥಿನಿಗೆ ಆಶೀರ್ವದಿಸಲು ಗುರುವೇ ಮನೆಗೆ ಬಂದಿರುವುದು ನಿಜಕ್ಕೂ ಸಂತೋಷ ಉಂಟು ಮಾಡಿದೆ. ಚಂದ್ರಶೇಖರ ಶಿವಾಚಾರ್ಯರು, ನಮ್ಮ ಭಾಗದ ಮಕ್ಕಳ ಪ್ರತಿಭೆಗಳ ಮೇಲೆ ಆಶೀರ್ವದಿಸಿ ಪ್ರೋತ್ಸಾಹಿಸುತ್ತಿರುವುದು ನಮಗೆ ಅತೀವ ಸಂತಸ ತಂದಿದೆ. ಬೈಲಹೊಂಗಲದ ಜನತೆ ಪರವಾಗಿ ಗುರುಗಳಿಗೆ ನಮಿಸುತ್ತಾ ರೂಪಾ ಪಾಟೀಲ್ ಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ MK ಹುಬ್ಬಳ್ಳಿ ಅಕ್ಷರದಾಸೋಹದ ಮಂಜುನಾಥ್ ಅಳವಣೆ ಅವರು ಉಪಸ್ಥಿತರಿದ್ದರು.