ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪೈಶಾಚಿಕ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಪ್ರವಾಸಕ್ಕೆಂದು ತೆರಳಿದ್ದ ಜೀವಗಳನ್ನು ಉಗ್ರರು ಹೀನಾಯವಾಗಿ ಕೊಂದು ಹಾಕಿದ್ದಾರೆ. ಈ ಕೃತ್ಯ ನಡೆಸಿದ ಪಾಪಿಗಳಿಗೆ ಶೀಘ್ರದಲ್ಲೇ ಶಿಕ್ಷೆಯಾಗಬೇಕೆಂಬ ಒತ್ತಾಯ ಎಲ್ಲಾ ಕಡೆಯಿಂದಲೂ ಕೇಳಿ ಬರ್ತಿದೆ. ಸಾಮಾನ್ಯರಿಂದ ಹಿಡಿದು ರಾಜಕಾರಣಿಗಳು, ಸಿನಿಮಾತಾರೆಯರು ಪಹಲ್ಗಾಮ್ ಪೈಶಾಚಿಕ ಕೃತ್ಯವನ್ನು ಖಂಡಿಸುತ್ತಿದ್ದಾರೆ.
ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಚಿತ್ರರಂಗದ ತಾರೆಯರು ಈ ಬಗ್ಗೆ ಧ್ವನಿ ಕೂಡಿಸಿದ್ದಾರೆ. ಈಗ ಬಾಲಿವುಡ್ ಖಾನ್ ಗಳಾದ ಸಲ್ಮಾನ್ ಹಾಗೂ ಶಾರುಖ್ ಖಾನ್ ಕೂಡ ಕಾಶ್ಮೀರದ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಲ್ಮಾನ್ ಖಾನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ, ಕಾಶ್ಮೀರ, ಭೂಮಿಯ ಮೇಲಿನ ಸ್ವರ್ಗ. ಆದರೆ ಈಗ ನರಕವಾಗಿ ಬದಲಾಗುತ್ತಿದೆ. ಅಮಾಯಕರನ್ನು ಗುರಿಯಾಗಿಸಲಾಗುತ್ತಿದೆ, ನನ್ನ ಹೃದಯವು ಅವರ ಕುಟುಂಬಗಳಿಗೆ ಮಿಡಿಯುತ್ತಿದೆ ಎಂದು ನೋವನ್ನು ಹೊರಹಾಕಿದ್ದಾರೆ.
ಶಾರುಖ್ ಖಾನ್., ಪಹಲ್ಗಾಮ್ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು. ಇಂತಹ ಸಮಯದಲ್ಲಿ, ನಾವು ದೇವರ ಕಡೆಗೆ ತಿರುಗಿ ಸಂತ್ರಸ್ತ ಕುಟುಂಬಗಳಿಗಾಗಿ ಪ್ರಾರ್ಥಿಸಬಹುದು ಮತ್ತು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ರಾಷ್ಟ್ರವಾಗಿ ನಾವು ಒಗ್ಗಟ್ಟಿನಿಂದ, ಬಲವಾಗಿ ನಿಂತು ಈ ಘೋರ ಕೃತ್ಯದ ವಿರುದ್ಧ ನ್ಯಾಯವನ್ನು ಪಡೆಯೋಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.