ಸಾಲ್ಟ್, ಕೊಹ್ಲಿ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ RR ವಿರುದ್ಧ ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ ಸಿಕ್ಕಿದೆ. ತವರಿನ ಅಂಗಳದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ವಿಕೆಟ್ಗಳಿಂದ ಬಗ್ಗು ಬಡಿದಿದೆ.
ಆರ್ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿ, ರಾಜಸ್ಥಾನ್ ರಾಯಲ್ಸ್ ಆಟಗಾರರನ್ನು ಬ್ಯಾಟಿಂಗ್ ಮಾಡಲು ಆಹ್ವಾನ ಮಾಡಿದರು. ಆರ್ಆರ್ ಪರ ಆರಂಭಿಕರಾಗಿ ಕ್ರೀಸ್ಗೆ ಆಗಮಿಸಿದ ಕ್ಯಾಪ್ಟನ್ ಸಂಜು ಸ್ಯಾಮ್ಸನ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ಪಡೆಯಲಿಲ್ಲ. ನಾಯಕ ಸಂಜು 15 ರನ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಓಪನರ್ ಯಶಸ್ವಿ ಜೈಸ್ವಾಲ್ ಅಮೋಘವಾದ ಅರ್ಧಶತಕ ಸಿಡಿಸಿದರು. ಕೇವಲ 35 ಎಸೆತದಲ್ಲಿ 1 ಸಿಕ್ಸರ್ ಹಾಗೂ 7 ಭರ್ಜರಿ ಬೌಂಡರಿ ಇಂದ ಹಾಫ್ಸೆಂಚುರಿ ಗಳಿಸಿದರು. ಒಟ್ಟು 47 ಎಸೆತಗಳಲ್ಲಿ ಜೈಸ್ವಾಲ್ 10 ಫೋರ್, 2 ಸಿಕ್ಸರ್ನಿಂದ 75 ರನ್ಗೆ ಎಲ್ಬಿಗೆ ಬಲಿಯಾದರು. ಹೆಟ್ಮರ್ 9, ಧೃವ್ ಜುರೆಲ್ 35 ರನ್ಗಳ ನೆರವಿನಿಂದ ರಾಜಸ್ಥಾನ ರಾಯಲ್ಸ್ 20 ಓವರ್ಗಳಲ್ಲಿ 4 ವಿಕೆಟ್ಗೆ 174 ರನ್ಗಳ ಸಾಧಾರಣ ಟಾರ್ಗೆಟ್ ಅನ್ನು ನೀಡಿತ್ತು.
ಈ ಗುರಿ ಬೆನ್ನು ಹತ್ತಿದ್ದ ಆರ್ಸಿಬಿ ಆರಂಭದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿತು. ಓಪನರ್ ಆಗಿ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಾಯಲ್ ಬೌಲರ್ಗಳಿಗೆ ಬೆಂಡೆತ್ತಿದರು. ಹೀಗಾಗಿಯೇ ಸಾಲ್ಟ್ ಕೇವಲ 28 ಎಸೆತಗಳಲ್ಲಿ 50 ರನ್ ಗಳಿಸಿದರು. ಬ್ಯಾಟಿಂಗ್ ಮುಂದುವರೆಸಿದ್ದ ಸಾಲ್ಟ್, ಒಟ್ಟು 5 ಬೌಂಡರಿ ಹಾಗೂ 6 ಸಿಕ್ಸರ್ಗಳಿಂದ ಕೇವಲ 33 ಎಸೆತದಲ್ಲಿ 65 ರನ್ಗೆ ಔಟ್ ಆದರು.
ಇವರ ನಂತರ ಕ್ರೀಸ್ಗೆ ಆಗಮಿಸಿದ ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ ಒಳ್ಳೆಯ ಸಾಥ್ ಕೊಟ್ಟರು. ಇದರಿಂದ ಕಿಂಗ್ ಕೊಹ್ಲಿ 42 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ನಿಂದ ಅರ್ಧಶತಕ ಪೂರೈಸಿದರು. ಇದು ಈ ಟೂರ್ನಿಯಲ್ಲಿ ಕೊಹ್ಲಿಯ 3ನೇ ಅರ್ಧಶತಕವಾದರೆ, ಅವರ ಐಪಿಎಲ್ ವೃತ್ತಿ ಜೀವನದ 59ನೇ ಹಾಫ್ಸೆಂಚುರಿ ಆಗಿದೆ. ಕೊನೆಗೆ ವಿರಾಟ್ ಕೊಹ್ಲಿ ಅಜೇಯ 62 ರನ್ ಹಾಗೂ ದೇವದತ್ ಪಡಿಕ್ಕಲ್ ಅಜೇಯ 40 ರನ್ಗಳಿಂದ ಆರ್ಸಿಬಿ, ಆರ್ಆರ್ ವಿರುದ್ಧ ಜಯಭೇರಿ ಬಾರಿಸಿತು. 17.3 ಓವರ್ಗಳಲ್ಲಿ 1 ವಿಕೆಟ್ಗೆ 175 ರನ್ ಗಳಿಸಿ ಗೆಲುವು ಪಡೆದಿದೆ.