ಆರ್ ಸಿಬಿ ವೇಗಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದ್ದು, ಮಹಿಳೆಯೋರ್ವರು ದೈಹಿಕ ಕಿರುಕುಳದ ದೂರು ಕೊಟ್ಟಿದ್ದಾರೆ. ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ದೊಡ್ಡ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಶ್ ದಯಾಳ್ ಅವರ ಮೇಲೆ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಹಾಗೆಯೇ ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ತನ್ನನ್ನು ಶೋಷಿಸಿದ್ದಾರೆ. ಅಲ್ಲದೆ ದಯಾಳ್ ನನ್ನನ್ನು ನಿಮ್ಮ ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ, ಆ ಬಳಿಕ ನನಗೆ ವಂಚಿಸಿದ್ದಾರೆ ಎಂದು ಮಹಿಳೆ ತನ್ನ ದೂರಿನಲ್ಲಿ ಹೇಳಿಕೊಂಡಿದ್ದಾರೆ.