ತುಮಕೂರು : ಅಪ್ರಾಪ್ತ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಆಪಾದಿತ ಬಸವರಾಜುಗೆ ಒಂದು ಲಕ್ಷ ದಂಡ ಸೇರಿ ಬಾಲಕನಿಗೆ 9 ಲಕ್ಷ ಪರಿಹಾರ ನೀಡುವಂತೆ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ ಪೋಕ್ಸೋ ಕೋರ್ಟ್ ಆದೇಶ ನೀಡಿದೆ.
ಏನಿದು ಪ್ರಕರಣ..?
ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಹಾಸ್ಟಲ್ ನಲ್ಲಿ ಉಳಿದುಕೊಂಡಿದ್ದನು. ಹಾಸ್ಟೆಲ್ ನಿಂದ ಬರುವಾಗ ಆರೋಪಿ ಮೊಬೈಲ್‌ನಿಂದ ತಂದೆಗೆ ಕರೆ ಮಾಡಿದ್ದನು. ಆದಾದ ಬಳಿಕ ಆರೋಪಿ ಬಸವರಾಜು ಬಾಲಕನಿಗೆ ಕುರ್ ಕುರೆ ಹಾಗೂ ಚಿಕನ್ ಕೊಡಿಸುವ ಆಮಿಷವೊಡ್ಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆಯಿಂದ ಹೆದರಿದ ಬಾಲಕ ಯಾರಿಗೂ ವಿಷಯ ತಿಳಿಸದೆ ಅನಾರೋಗ್ಯಕ್ಕೆ ತುತ್ತಾಗಿದ್ದ. ಬಳಿಕ ತಂದೆಗೆ ಕರೆ ಮಾಡಿ ಊರಿಗೆ ವಾಪಸ್ ಹೋಗಿದ್ದಾನೆ. ಆರೋಗ್ಯದಲ್ಲಿ ಏರುಪೇರಾಗಿ ಚಿಂತಾಜನಕವಾಗಿದ್ದ ಬಾಲಕನನ್ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಈ ವೇಳೆ ವೈದ್ಯರು ಪರೀಕ್ಷೆ ಮಾಡಿದಾಗ ಪ್ರಕರಣ ಬಯಲಿಗೆ ಬಂದಿದೆ.
ಘಟನೆ ಸಂಬಂಧ ಆರೋಪಿ ವಿರುದ್ದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂದಿನ ಪೊಲೀಸ್ ಇನ್ ಸ್ಪೆಕ್ಟರ್ ನವೀನ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಬಸವರಾಜ್ ಆರೋಪ ಸಾಬೀತಾದ ಹಿನ್ನೆಲೆ, ನೊಂದ ಬಾಲಕನಿಗೆ ಪರಿಹಾರ ಕೊಡುವಂತೆ ತುಮಕೂರು ಕೋರ್ಟ್ ತೀರ್ಪು ಪ್ರಕಟಿಸಿದೆ. ಅಪ್ರಾಪ್ತನ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಆಶಾ.ಕೆ.ಎಸ್. ವಾದ ಮಂಡಿಸಿದ್ದರು.