ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಭಾರತೀಯ ಚಿತ್ರರಂಗದ ದುಬಾರಿ ನಟರಲ್ಲಿ ಒಬ್ಬರು. ಒಂದು ಸಿನಿಮಾಗೆ 100 ಕೋಟಿ ಅಧಿಕ ಸಂಭಾವನೆ ಪಡೆಯುವ ಬಾದ್ ಷಾ ಮನ್ನತ್ ನಿವಾಸವೇ ಬರೋಬ್ಬರಿ 100 ರಿಂದ 200 ಕೋಟಿ ಬೆಲೆ ಬಾಳುತ್ತದೆಯಂತೆ. ಮುಂಬೈನ ಬಾಂದ್ರಾದಲ್ಲಿರುವ ಈ ಬಿಲ್ಡಿಂಗ್ ಬರೋಬ್ಬರಿ 6 ಅಂತಸ್ತನ್ನು ಹೊಂದಿದ್ದು, 27 ಸಾವಿರ ಚದರ ಅಡಿಗಳಿಷ್ಟಿದೆಯಂತೆ. ವಿಂಟೇಜ್ ಹಾಗೂ ಮಾರ್ಡನ್ ಅರ್ಟಿಕೆಕ್ಟ್ ಸಮ್ಮಿಶ್ರಣವಾಗಿರುವ ಮನ್ನತ್ ನಿವಾಸವನ್ನು ಶಾರುಖ್ ಹಾಗೂ ಇಡೀ ಕುಟುಂಬ ತೊರೆದಿದೆ ಎಂಬ ಸುದ್ದಿ ಮುಂಬೈ ಅಂಗಳದಲ್ಲಿ ಜೋರಾಗಿದೆ.
ದೇಶ-ವಿದೇಶಗಳಲ್ಲಿ ಕೋಟ್ಯಾನು ಕೋಟಿ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಐಷಾರಾಮಿ ಮನ್ನತ್ ನಿವಾಸ ತೊರೆಯುವುದಕ್ಕೂ ಕಾರಣವಿದೆ. ಈ ನಿವಾಸದ ನವೀಕರಣ ಕೆಲಸಗಳು ಆರಂಭವಾಗಿದ್ದು, ಹೀಗಾಗಿ ಶಾರುಖ್ ಮುಂಬೈನ ಪಾಲಿ ಹಿಲ್ಸ್‌ನಲ್ಲಿರುವ ಬಾಲಿವುಡ್ನ ಭಗ್ನಾನಿ ಕುಟುಂಬದ ಎರಡು ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಅಪಾರ್ಟ್ಮೆಂಟ್ಗಳಲ್ಲಿ ಒಂದು ನಿರ್ಮಾಪಕ ಜಾಕಿ ಭಗ್ನಾನಿ ಅವರಿಗೆ ಸೇರಿದ್ದು, ಇನ್ನೊಂದು ಅವರ ಸಹೋದರಿ ದೀಪ್ಶಿಖಾ ದೇಶ್ಮುಖ್ ಅವರಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಅಪಾರ್ಟ್ ಮೆಂಟ್ ಒಂದು ತಿಂಗಳ ಬಾಡಿಗೆಯೇ 24 ಲಕ್ಷಕ್ಕೂ ಅಧಿಕ ಇದೆ. ಇನ್ನೂ ಸೆಕ್ಯೂರಿಟಿಗಾಗಿ 33 ಲಕ್ಷ ಹಣವನ್ನು ಕಿಂಗ್ ಖಾನ್ ನೀಡಿದ್ದಾರಂತೆ.
1914ರಲ್ಲಿ ನಿರ್ಮಾಣವಾಗಿದ್ದು ಎನ್ನಲಾಗುವ ಮನ್ನತ್ ನಿವಾಸವನ್ನು ಮೊದಲ ಪ್ಯಾರಿಸ್ ಫ್ಯಾಮಿಲಿ ಬಳಿ ಇತ್ತಂತೆ. ಆ ನಂತರ 1990ರಲ್ಲಿ ಇದನ್ನು ರಿಯಲ್ ಎಸ್ಟೇಟ್ ಕಂಪನಿ ಖರೀದಿ ಮಾಡಿತು. ಮೊದಲು ಸಲ್ಮಾನ್ ಖಾನ್ ಬಳಿ ಇದನ್ನು ಖರೀದಿಸುವಂತೆ ಸಂಸ್ಥೆ ಬೇಡಿಕೆ ಇಟ್ಟಿತ್ತು. ಆದರೆ, ಇದಕ್ಕೆ ಅವರು ಒಪ್ಪಿಲ್ಲ. ಆ ಬಳಿಕ ಆಫರ್ ಶಾರುಖ್ ಖಾನ್ ಬಳಿ ಹೋಯಿತು. 2001ರಲ್ಲಿ ಶಾರುಖ್ ಇದನ್ನು ಖರೀದಿಸಿದರು. ಅಂದು ಬರೀ 13 ಕೋಟಿಗೆ ಈ ನಿವಾಸವನ್ನು ಶಾರುಖ್ ಖರೀದಿ ಮಾಡಿದ್ದರಂತೆ, ಈಗ ಈ ಬಂಗಲೆ ಬೆಲೆ 100 ರಿಂದ 200 ಕೋಟಿ ಬಾಳುತ್ತದೆಯಂತೆ. ಇಂಟೀರಿಯರ್ ಡಿಸೈನ್ ನಲ್ಲಿ ಫೇಮಸ್ ಆಗಿರುವ ಗೌರಿ ಖಾನ್ ಈ ನಿವಾಸಕ್ಕೂ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ.