ಬೆಂಗಳೂರು, ಮೇ 08; “ನಮ್ಮ ರಾಜ್ಯದಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿದ್ದು, ಇಲ್ಲಿ ಓದಿದವರು ವಿಶ್ವದ ಮೂಲೆ ಮೂಲೆಯಲ್ಲಿ ಯಶಸ್ಸು ಸಾಧಿಸಿದ್ದಾರೆ. ಹೀಗಾಗಿ ನಮ್ಮ ಮಾನವ ಸಂಪನ್ಮೂಲವೇ ನಮ್ಮ ರಾಜ್ಯದ ಶಕ್ತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ಪಾಕ್ ಪರ ಪೋಸ್ಟ್: ವಿಜಯಪುರದ ವಿದ್ಯಾರ್ಥಿನಿ ಮೇಲೆ ದಾಖಲಾಯ್ತು FIR- ಕರ್ನಾಟಕದಲ್ಲಿ ಬಾಲ ಬಿಚ್ಚಿದ ಪಾಕ್ ಪ್ರೇಮಿ!
ಸುರಾನ ಎಜುಕೇಶನಲ್ ಇನ್ಸ್ಟಿಟ್ಯೂಷನ್ ವತಿಯಿಂದ ಪೀಣ್ಯ ಕಾಲೇಜಿನಲ್ಲಿ ಗುರುವಾರ ನಡೆದ 4ನೇ ಆವೃತ್ತಿಯ ಜಿಸಿಸ್ ಕಾನ್ಕ್ಲೇವ್ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಇಂತಹ ಕಾರ್ಯಕ್ರಮಗಳು ಕೇವಲ ಭಾಷಣಕ್ಕೆ ಮಾತ್ರ ಸೀಮಿತವಲ್ಲ. ಸಮಾಜ, ವ್ಯವಸ್ಥೆ ಹಾಗೂ ಶಿಕ್ಷಣದ ಮಧ್ಯೆ ಸೇತುವೆಯಾಗಿ ನಿಲ್ಲುತ್ತವೆ. ಕರ್ನಾಟಕ ಬಲಿಷ್ಠ ರಾಜ್ಯ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರಧಾನಿ ವಾಜಪೇಯಿ ಅವರು ಇಷ್ಟು ದಿನ ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಇತರೆ ನಗರಗಳಿಗೆ ತೆರಳುತ್ತಿದ್ದರು. ಈಗ ಕಾಲ ಬದಲಾಗಿದೆ. ಅವರು ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿ ಹಾಗೂ ಇತರೆ ನಗರಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು” ಎಂದರು.
“ಇಂತಹ ಬದಲಾವಣೆಗೆ ಮೂಲ ಕಾರಣ ನಮ್ಮ ಮಕ್ಕಳು, ಅವರ ಜ್ಞಾನ ಹಾಗೂ ಸಂಸ್ಕೃತಿ. ಬೆಂಗಳೂರು ಹಾಗೂ ಕರ್ನಾಟಕದ ಪ್ರಮುಖ ಬಲ ಎಂದರೆ ಇಲ್ಲಿನ ಮಾನವ ಸಂಪನ್ಮೂಲ. ಕಳೆದ ನಾಲ್ಕೈದು ದಶಕಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆ ಇದಕ್ಕೆ ಮೂಲ ಕಾರಣ” ಎಂದು ಹೇಳಿದರು.
“ಬೆಂಗಳೂರು ಗುಣಮಟ್ಟದ ಶಿಕ್ಷಣದ ಕೇಂದ್ರವಾಗಿದೆ. ಹೀಗಾಗಿ ಬೇರೆ ರಾಜ್ಯದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಲು ಬರುತ್ತಿದ್ದಾರೆ. ನಾವು ವಿಶ್ವದ ಯಾವುದೇ ಐಟಿ ಸಂಸ್ಥೆಗಳಿಗೆ ಹೋದರೂ ಶೇ.70ರಷ್ಟು ಭಾರತೀಯರು ಆ ಪೈಕಿ ಮೂರನೇ ಎರಡರಷ್ಟು ಜನ ಕರ್ನಾಟಕದವರಾಗಿದ್ದಾರೆ. ಹೀಗೆ ನಾವು ದೇಶಕ್ಕೆ ಕೊಡುಗೆ ನೀಡುತ್ತಿದ್ದೇವೆ” ಎಂದು ತಿಳಿಸಿದರು.
“ನಮ್ಮ ರಾಜ್ಯದಲ್ಲಿ 70 ಮೆಡಿಕಲ್ ಕಾಲೇಜುಗಳಿದ್ದು, ದೇಶದಲ್ಲೇ ಅತಿ ಹೆಚ್ಚು ಕಾಲೇಜುಗಳಿರುವ ರಾಜ್ಯವಾಗಿದೆ. ಪ್ರತಿ ವರ್ಷ ಸಾವಿರಾರು ವೈದ್ಯರನ್ನು ನಾವು ತಯಾರು ಮಾಡುತ್ತಿದ್ದೇವೆ. ಸುಮಾರು 50% ನಷ್ಟು ಮಂದಿ ವಿದೇಶಗಳಲ್ಲಿ ಸೇವೆ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ 270 ಇಂಜಿನಿಯರಿಂಗ್ ಕಾಲೇಜುಗಳಿವೆ. ನಮ್ಮಲ್ಲಿರುವ ಮಾನವ ಶಕ್ತಿ ಬೇರೆ ಯಾವ ರಾಜ್ಯದಲ್ಲೂ ಇಲ್ಲ” ಎಂದರು.
“ಬೆಂಗಳೂರು ಇಷ್ಟು ದೊಡ್ಡದಾಗಿ ಬೆಳೆದಿದ್ದರೆ ಇದು ಸರ್ಕಾರವೊಂದರಿಂದಲೇ ಸಾಧ್ಯವಾಗಿದ್ದಲ್ಲ. ಸರ್ಕಾರ ಕೇವಲ ನೀತಿ ರೂಪಿಸಿದೆ. ಈ ಬೆಳವಣಿಗೆಯಲ್ಲಿ ಜನರ ಕೊಡುಗೆ ಅಪಾರವಿದೆ. ಸುರಾನ ಸಂಸ್ಥೆ, ಸಿದ್ದಗಂಗಾ ಮಠ ಸೇರಿದಂತೆ ಅನೇಕ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ” ಎಂದು ಅಭಿಪ್ರಾಯಪಟ್ಟರು.
“ನಾವು ವಿದ್ಯೆಗೆ ಆದ್ಯತೆ ನೀಡುತ್ತಿದ್ದೇವೆ. ವಿದ್ಯೆಯಿಂದ ವಿನಯ ಬರುತ್ತದೆ, ವಿನಯದಿಂದ ಯೋಗ್ಯತೆ, ಯೋಗ್ಯತೆಯಿಂದ ಹಣ, ಹಣದಿಂದ ಧರ್ಮ, ಧರ್ಮದಿಂದ ಸುಖ ಬರಲಿದೆ. ಇದೆಲ್ಲದಕ್ಕೂ ಮೂಲ ವಿದ್ಯೆ” ಎಂದರು.
“ಸುರಾನ ಸಂಸ್ಥೆ ವಾಣಿಜ್ಯ ಉದ್ದೇಶ ಹೊರತಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಇವರ ಈ ಕಾರ್ಯದ ಜತೆಗೆ ಅವರಲ್ಲಿ ಒಬ್ಬರಾಗಿ ಈ ಡಿ.ಕೆ. ಶಿವಕುಮಾರ್ ಇದ್ದಾನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದು ತಿಳಿಸಿದರು.